7:13 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಕಾಂಗ್ರೆಸ್ ಸರಕಾರದಿಂದ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಅನ್ಯಾಯ: ಶಾಸಕ ವೇದವ್ಯಾಸ ಕಾಮತ್ ಆರೋಪ

27/12/2024, 21:17

ಮಂಗಳೂರು(reporterkarnataka.com): ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರಕಾರದಿಂದ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪ ಮಾಡಿದ್ದಾರೆ.


ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದ ವರ್ಗಗಳ ಸಮುದಾಯದ ಜನರ ಕಲ್ಯಾಣ, ಸಬಲೀಕರಣಕ್ಕಾಗಿ ನಾನಾ ಸರಕಾರಗಳು ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಾ ಬಂದಿವೆ. ಅದರಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿವಿಧ ನಿಗಮಗಳು ಕಾರ್ಯ ನಿರ್ವಹಿಸುತ್ತಿವೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 1,000 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ವಿವಿಧ ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹೊಸ ಅನುದಾನವನ್ನು ನೀಡುವುದು ಬಿಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಗೊಳಿಸಲಾಗಿದ್ದ ಕೋಟ್ಯಾಂತರ ರೂಪಾಯಿ ಅನುದಾನಗಳನ್ನೂ ಸಹ ರದ್ದುಪಡಿಸುವ ಆದೇಶ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದರು.
ಇದು ರಾಜ್ಯದಲ್ಲಿ ಹಿಂದುಳಿದ ವರ್ಗದವರನ್ನು ಮುನ್ನಲೆಗೆ ಬರಲು ಬಿಡದೇ ಹಿಂದುಳಿದವರಾಗಿಯೇ ಉಳಿಸುವ ಷಡ್ಯಂತ್ರವಾಗಿದ್ದು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅಹಿಂದ ವರ್ಗಕ್ಕೇ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ? ಎಂದು ಶಾಸಕರು ಪ್ರಶ್ನಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಮುದಾಯ ಭವನ, ಸಂಘ ಸಂಸ್ಥೆ, ವಿದ್ಯಾರ್ಥಿ ನಿಲಯ ಸೇರಿದಂತೆ ರಾಜ್ಯದಾದ್ಯಂತ ಸುಮಾರು 1093 ಹಿಂದುಳಿದ ವರ್ಗಗಳ ಕಾಮಗಾರಿಗಳಿಗೆ ನೀಡಲಾಗಿದ್ದ ಸಾವಿರಾರು ಕೋಟಿ ರೂಪಾಯಿ ಅನುದಾನದ ಮಂಜೂರಾತಿಯನ್ನು ಪ್ರಸ್ತುತ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ರದ್ದುಪಡಿಸಿದೆ (ದಾಖಲೆಗಳನ್ನು ಲಗತ್ತಿಸಲಾಗಿದೆ). ಅದರಲ್ಲಿ ನಮ್ಮ ಜಿಲ್ಲೆಯ ಕಾಮಗಾರಿಗಳು ಸಹ ಸೇರಿಕೊಂಡಿದ್ದು ದೇವಾಡಿಗ, ಕುಡುಬಿ, ಮೊಗವೀರ, ಬಿಲ್ಲವ, ಶೆಟ್ಟಿಗಾರ್ ಸೇರಿದಂತೆ ಎಲ್ಲಾ ಹಿಂದುಳಿದ ಸಮುದಾಯದ ಏಳಿಗೆಯನ್ನೇ ಕಡೆಗಣಿಸಲಾಗಿದೆ. ಎಲ್ಲಾ ಹಣ ಗ್ಯಾರೆಂಟಿಗೆ ಬಳಕೆಯಾಗುತ್ತಿದೆ, ಹಾಗಾಗಿ ಹೊಸ ಅನುದಾನ ಕೇಳಬೇಡಿ ಎನ್ನುವ ಸರ್ಕಾರ ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುದಾನಕ್ಕೂ ಕೊಕ್ಕೆ ಹಾಕುತ್ತಿರುವುದು ಯಾಕೆ? ಈ ಬಗ್ಗೆ ಕಾಂಗ್ರೆಸಿನಲ್ಲೇ ಇರುವ ಹಿಂದುಳಿದ ವರ್ಗಗಳ ನಾಯಕರು ಯಾಕೆ ಮೌನ ವಹಿಸಿದ್ದಾರೆ?
ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಹೀಗೆ ಹತ್ತು ಹಲವು ನಿಗಮಗಳ ಮೂಲಕ ಸಾಂಪ್ರದಾಯಿಕ ನೇರ ಸಾಲ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಕಾಯಕ ಕಿರಣ, ಅರಿವು, ಹೊಲಿಗೆ ಯಂತ್ರ ಇಂತಹ ಹತ್ತು ಹಲವು ಯೋಜನೆಗಳ ಮೂಲಕ ಹಿಂದುಳಿದ ಸಮುದಾಯಗಳ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಿ ಸ್ವಾವಲಂಬಿ ಬದುಕಿಗಾಗಿ ನೆರವು ನೀಡಲಾಗುತ್ತಿತ್ತು. ಆದರೆ ಈಗಿನ ಸರಕಾರ ಅದರಲ್ಲೂ ಫಲಾನುಭವಿಗಳ ಸಂಖ್ಯೆಯನ್ನು ಕಡಿತ ಮಾಡಿ ಸಮುದಾಯಕ್ಕೆ ಅನ್ಯಾಯವೆಸಗುತ್ತಿದೆ ಎಂದು ಅವರು ನುಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಸರಿಗೆ ಮಾತ್ರ ಬಜೆಟ್ ನಲ್ಲಿ 1600 ಕೋಟಿ ಘೋಷಣೆ ಮಾಡಿತ್ತು. ಆದರೆ ಈವರೆಗೆ ಕೇವಲ ಸಣ್ಣಪುಟ್ಟ ಅನುದಾನಗಳನ್ನು ಮಾತ್ರ ನೀಡಿ ಹಿಂದುಳಿದ ವರ್ಗಗಳ ಜನರ ಆರ್ಥಿಕ, ಔದ್ಯೋಗಿಕ, ಕೃಷಿ, ಮತ್ತು ಶಿಕ್ಷಣಕ್ಕಾಗಿ ಯಾವುದೇ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದು ಹಿಂದುಳಿದ ವರ್ಗದವರಿಗೆ ರಾಜ್ಯ ಸರ್ಕಾರ ಮಾಡುತ್ತಿರುವ ಘೋರ ಅನ್ಯಾಯ. ಅಲ್ಲದೇ ರಾಜ್ಯದ ಹಿಂದುಳಿದ ವರ್ಗಗಳ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಕ್ಕಾಗಿ ವಿವಿಧ ನಿಗಮಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೆ ನಯಾ ಪೈಸೆ ಹಣ ಬಿಡುಗಡೆಯಾಗದೇ ಆ ವಿದ್ಯಾರ್ಥಿಗಳಿಗೂ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ಹಿಂದೆ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ನೂರಾರು ಕೋಟಿ ರೂಪಾಯಿಗಳನ್ನು ತನ್ನ ಸ್ವಾರ್ಥಕ್ಕಾಗಿ ಬೇರೆಡೆಗೆ ವರ್ಗಾಯಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಹಿಂದುಗಳಿದ ವರ್ಗಗಳ ನಿಗಮಗಳಿಗೂ ಅದೇ ಅನ್ಯಾಯ ಮುಂದುವರಿಸಿದೆ ಎಂದರು.
ಈ ಹಿಂದೆ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಎಂದು ಮಂಗಳೂರಿನಿಂದ ವಿಧಾನಸೌಧವರೆಗೆ ಪಾದಯಾತ್ರೆ ಮಾಡಿದ್ದವರು, ಈಗ ನಾರಾಯಣ ಗುರು ನಿಗಮಕ್ಕೆ ಈವರೆಗೆ ಅಧ್ಯಕ್ಷನೂ ನೇಮಕವಾಗಿಲ್ಲ, ಅನುದಾನವೂ ನೀಡಲಾಗಿಲ್ಲ, ಆದರೂ ಮೌನವಾಗಿದ್ದಾರೆ. ಬಂಟರ ನಿಗಮದ ಸ್ಥಿತಿಯೂ ಅದೇ ರೀತಿ ಇದ್ದು ಯಾವುದೇ ಸಕಾರಾತ್ಮಕ ಬೆಳವಣಿಗೆ ಇಲ್ಲ. ಕೂಡಲೇ ಈ ಅನ್ಯಾಯವನ್ನು ಸರಿಪಡಿಸಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಅನುದಾನಗಳ ಸಹಿತ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಕಂಡೆಟ್ಟು, ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಉಪಮೇಯರ್ ಭಾನುಮತಿ, ಪೂರ್ಣಿಮಾ, ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು