ಇತ್ತೀಚಿನ ಸುದ್ದಿ
ಪಶ್ಚಿಮ ಬಂಗಾ ಕಂಪನಿ ಐವಿ ದ್ರಾವಣ ಉತ್ಪಾದಿಸದಂತೆ ನಿರ್ಬಂಧ ಹೇರಲಾಗಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
17/12/2024, 20:04
*ಬಾಣಂತಿಯರ ಸಾವುಗಳ ಕುರಿತು ಸದನಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದ ಆರೋಗ್ಯ ಸಚಿವರು*
*ಬಳ್ಳಾರಿ ಪ್ರಜರಣವಷ್ಟೇ ಅಲ್ಲ ರಾಜ್ಯದ ಪ್ರತಿಯೊಂದ ತಾಯಿ ಮಗು ಸಾವು ಪ್ರಕರಣಗಳ ಪರಿಶೀಲನೆ ನಡೆಸಲು ತಂಡ ರಚಿಸಲಾಗಿದೆ*
*ವ್ಯವಸ್ಥೆಯಲ್ಲಿರುವ ಲೋಪ ದೋಷಗಳನ್ನ ಸರಿಪಡಿಸುವತ್ತ ಪ್ರತಿಪಕ್ಷಗಳ ಸಹಕಾರ ಕೋರಿದ ಆರೋಗ್ಯ ಸಚಿವರು*
ಬೆಳಗಾವಿ ಸುವರ್ಣಸೌಧ(reporterkarnataka.com):ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಪೂರೈಸಿದ್ದ ಪಶ್ಚಿಮ ಬಂಗಾ ಕಂಪನಿಯನ್ನ ಈಗಾಗಲೇ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುವ ವರೆಗು ಕಂಪನಿ ಐವಿ ದ್ರಾವಣ ಉತ್ಪಾದನೆ ಮಾಡದಂತೆ ಕಂಪನಿಯ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ನಲ್ಲಿ ಬಾಣಂತಿಯರ ಸಾವುಗಳ ಕುರಿತು ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿ ಔಷಧ ನಿಯಂತ್ರಣ ವ್ಯವಸ್ಥೆಯಲ್ಲಿ ಇರುವ ಲೋಪ ದೋಷಗಳು ಈ ರೀತಿಯ ಪ್ರಕರಣಗಳಿಗೆ ಕಾರಣವಾಗಿದೆ ಎಂದರು.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ತಜ್ಞ ವೈದ್ಯರ ತಂಡವನ್ನ ರಚಿಸಿ ಪರಿಶೀಲಿಸಲಾಗಿತ್ತು. ತಜ್ಞರ ತಂಡ ಐವಿ ರಿಂಗರ್ ಲ್ಯಾಕ್ಟೇಟ್ ಬಗ್ಗೆ ಸಂಶಯ ವ್ಯಕ್ತಪಡಿಸಿತು. ವರದಿಯ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪಶ್ಚಿಮ ಬಂಗಾ ಕಂಪನಿ ಪೂರೈಸಿದ್ದ ಎಲ್ಲ ಬ್ಯಾಚ್ ಗಳ ದ್ರಾವಣವನ್ನ ತಡೆಹಿಡಿದು, ಟೆಸ್ಟಿಂಗ್ ಮಾಡಿಸಲಾಗಿದೆ. ಅಲ್ಲದೇ ಉತ್ತಮ ಗುಣಮಟ್ಟ ಹೊಂದಿರದ 9 ಬ್ಯಾಚ್ ಗಳ ಹಿನ್ನೆಲೆಯಲ್ಲಿ ಕಂಪನಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪಶ್ಚಿಮ ಬಂಗಾ ಕಂಪನಿಯ ಪೂರೈಸಿದ್ದ 22 ಬ್ಯಾಚ್ ಗಳು ಗುಣಮಟ್ಟ ಹೊಂದಿಲ್ಲ ಎಂದು ರಾಜ್ಯದ ಡ್ರಗ್ ಕಂಟ್ರೋಲರ್ ವರದಿ ನೀಡಿದ್ದರೂ, ಇದರಲ್ಲಿ ನಾಲ್ಕು ಬ್ಯಾಚ್ ಗಳಿಗೆ ಸೆಂಟ್ರಲ್ ಡ್ರಗ್ ಲ್ಯಾಬ್ ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿತ್ತು.
ಈ ಬಗ್ಗೆ ಕೇಂದ್ರ ಡ್ರಗ್ ಕಂಟ್ರೋಲರ್ ಗೆ ಪತ್ರ ಬರೆದು, ಬಾಣಂತಿಯರ ಸಾವಿನ ಪ್ರಕರಣ ಉಲ್ಲೇಖಿಸಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಕೇಂದ್ರ ಡ್ರಗ್ ಕಂಟ್ರೋಲರ್ ಸೇರಿದಂತೆ ರಾಜ್ಯ ಹಾಗೂ ಪಶ್ಚಿಮ ಬಂಗಾಳದ ಡ್ರಗ್ ಕಂಟ್ರೋಲರ್ ಗಳು ಕಂಪನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಉತ್ಪಾದನೆಯಲ್ಲಿ ಗಣಮಟ್ಟದ ವ್ಯವಸ್ಥೆ ಹೊಂದಿಲ್ಲ ಎಂದು ವರದಿ ನೀಡಿದ್ದಾರೆ. ಅಲ್ಲದೇ ಐವಿ ದ್ರಾವಣ ಉತ್ಪಾದನೆ ಮಾಡದಂತೆ ಪಶ್ಚಿಮ ಬಂಗಾ ಕಂಪನಿ ಮೇಲೆ ನಿರ್ಬಂಧ ಕೂಡ ಹೇರಲಾಗಿದೆ. ಇದು ಒಂದು ಉತ್ತಮ ಬೆಳವಣಿಗೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನದಲ್ಲಿ ಹೇಳಿದರು.
ಸಾವಿಗೀಡಾದ ಬಾಣಂತಿಯರಿಗೆ ತಲಾ ಐದು ಲಕ್ಷ ಪರಿಹಾರವನ್ನ ಘೋಷಿಸಲಾಗಿದ್ದು, ಪಶ್ಚಿಮ ಬಂಗಾ ಕಂಪನಿಯಿಂದ ಹೆಚ್ಚಿನ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಡ್ರಗ್ ವ್ಯವಸ್ಥೆಯಲ್ಲಿ ಲೋಪ ದೋಷಗಳಿರುವುದು ನಿಜ. ದೇಶದಲ್ಲಿಯೇ ಡ್ರಗ್ ಲಾಬಿ ಜೋರಾಗಿದೆ. ಇದನ್ನ ನಿಯಂತ್ರಣ ಮಾಡಲು ನಮ್ಮ ಕೇಂದ್ರದ ಕಾಯ್ದೆಗಳು ಸಡಿಲವಾಗಿವೆ. ರಾಜ್ಯ ಸರ್ಕಾರ ತನ್ನ ಹಂತದಲ್ಲಿ ವ್ಯವಸ್ಥೆ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಈ ನಿಟ್ಟಿನಲ್ಲಿ ರಾಜ್ಯದ ಔಷಧಿ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆಯನ್ನ ವಿಲೀನಗೊಳಿಸಲಾಗಿದೆ. ಇದರಿಂದ ಔಷಧ ನಿಯಂತ್ರಣ ಇಲಾಖೆ ಐಎಎಸ್ ಮಟ್ಟದ ಅಧಿಕಾರಿ ಮೇಲ್ವಿಚಾರಣೆಗೆ ಒಳಪಟ್ಟಿದೆ ಎಂದರು.
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾದ ಬಾಣಂತಿಯರ ಪ್ರಕರಣ ಅಷ್ಟೇ ಅಲ್ಲ.. ರಾಜ್ಯದಲ್ಲಿ ನಡೆದ ಪ್ರತಿಯೊಂದು ತಾಯಿ ಮಗುವಿನ ಸಾವುಗಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಎಲ್ಲ ಪ್ರಕರಣಗಳನ್ನ ಪರಿಶೀಲನೆ ನಡೆಸಿ ವರದಿ ನೀಡುವಂತೆ ಹೇಳಿದ್ದೇನೆ. ಸಾವಿಗೀಡಾದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಜವಾಬ್ದಾರಿ. ಲೋಪ ದೋಷಗಳನ್ನ ಸರಿಪಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
*ಬಾಣಂತಿಯರ ಸಾವಿನ ಕುರಿತು ವಿಧಾನ ಪರಿಷತ್ ನಲ್ಲಿ ಸಚಿವರ ಹೇಳಿಕೆಯ ಹೈಲೈಟ್ಸ್ ಇಲ್ಲಿದೆ*
* ನವೆಂಬರ್ 9, 10 ಮತ್ತು 11 ರಂದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಿದ 34 ಸಿಸೇರಿಯನ್ ಆಪರೇಷನ್‌ಗಳಲ್ಲಿ 07 ಬಾಣಂತಿಯರು ತೊಂದರೆಗೀಡಾಗಿದ್ದು, ಮೂತ್ರಪಿಂಡದ ತೊಂದರೆಯಿಂದ ಮತ್ತು ಬಹು ಅಂಗಗಳ ವೈಫಲ್ಯತೆ ಕಾರಣಗಳಿಂದ 5 ಬಾಣಂತಿಯರು ಸಾವೀಗೀಡಾಗಿದ್ದು, ಉಳಿದ 2 ಬಾಣಂತಿಯರು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.
* ಘಟನೆ ವರದಿಯಾದ ಕೂಡಲೇ ರಾಜೀವ್ ಗಾಂಧಿ ಆರೋಗ್ಯ ವಿ.ವಿಯ ತಜ್ಞ ವೈದ್ಯರ ತಂಡವನ್ನ ರಚಿಸಲಾಯಿತು. ತಾಯಂದಿರ ಮರಣಗಳ ಪರಿಶೀಲನೆಯನ್ನು ನಡೆಸಿದ ತಂಡ ದಿನಾಂಕ:16/11/2024 ರಂದು ವರದಿಯನ್ನು ಸಲ್ಲಿಸಿರುತ್ತದೆ.
* ವರದಿಯನ್ವಯ ಜಿಲ್ಲಾ ಆಸ್ಪತ್ರೆ ಬಳ್ಳಾರಿಯಲ್ಲಿ ವೈದ್ಯಾಧಿಕಾರಿಗಳ ತಂಡ ಸಿಸೇರಿಯನ್ ಆಪರೇಷನ್ ಮಾಡುವಲ್ಲಿ ಯಾವುದೇ ನಿರ್ಲಕ್ಷ್ಯತೆ ಅಥವಾ ಕರ್ತವ್ಯ ಲೋಪ ಎಸಗಿರುವುದಿಲ್ಲ.. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಬಗ್ಗೆ ಅನುಮಾನವನ್ನ ವ್ಯಕ್ತವಾಯಿತು.
* ವರದಿಯನ್ನು ಆದರಿಸಿ ಮುಂಜಾಗೃತೆ ದೃಷ್ಟಿಯಿಂ ತಕ್ಷಣ KSMSCL ನಿಂದ ಎಲ್ಲಾ ಹಂತದ ಆರೋಗ್ಯ ಸೌಲಭ್ಯಗಳಲ್ಲಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಬಳಕೆಯನ್ನು (ಎಲ್ಲಾ ಬ್ಯಾಚ್ ಗಳು) ಹಿಂಪಡೆಯಲಾಗಿದೆ ಹಾಗೂ ರಾಜ್ಯದ ಎಲ್ಲಾ ಆರೋಗ್ಯ
ಸಂಸ್ಥೆಗಳಲ್ಲಿ ಉಳಿದಿರುವ ದ್ರಾವಣವನ್ನು ಜಿಲ್ಲಾ ಮಟ್ಟದ ಔಷಧ ಉಗ್ರಾಣಗಳಿಗೆ ಹಿಂಪಡೆಯಲಾಗಿದೆ.
* ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವುಗಳ ಕುರಿತು ಪರಿಶೀಲನಾ ಸಭೆಯನ್ನು ನಡೆಸಲಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ಪರಿಹಾರ ಮೊತ್ತವನ್ನು ಘೋಷಿಸಿರುತ್ತಾರೆ.
* ಪ್ರಕರಣದ ಕುರಿತು Drugs Controller General of India ರವರಿಗೆ ಪತ್ರ ಬರೆಯಲಾಗಿದ್ದು M/S Paschim Banga ಕಂಪನಿ ಮತ್ತು ಸಂಬಂಧಿಸಿದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
* ರಿಂಗರ್ ಲ್ಯಾಕ್ಟೇಟ್ ದ್ರಾವಣ ಮಾದರಿ ಪರೀಕ್ಷೆಯಲ್ಲಿ ನಿರ್ಲಕ್ಷ್ಯತೆ ತೋರಿರುವ ಔಷಧ ನಿಯಂತ್ರಕರಾದ ಡಾ.ಉಮೇಶ್ ರವರನ್ನು ಅಮಾನತ್ತುಗೊಳಿಸಲಾಗಿದ್ದು, ವಸ್ಥಾಪಕ ನಿರ್ದೇಶಕರು (KSMSCL) ಇವರ ಮೇಲೆ ಇಲಾಖಾ ವಿಚಾರಣೆಗೆ showcause ನೋಟೀಸ್ ಜಾರಿ ಮಾಡಲಾಗಿದೆ.
* ಪಶ್ಚಿಮ ಬಂಗಾ ಪನಿಯನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು, ಸ್ಟಾಂಡರ್ಡ್ ಕ್ವಾಲಿಟಿ ಹೊಂದಿರದ 9 ಐವಿ ದ್ರಾವಣ ಬ್ಯಾಚ್ ಗಳ ಮೇಲೆ ಪ್ರಾಸಿಕ್ಯೂಷನ್ ನಡೆಸಲಾಗುತ್ತಿದೆ..
* ಬಳ್ಳಾರಿ ಜಿಲ್ಲೆಗೆ ಒಟ್ಟು 19 RL ಬ್ಯಾಚ್ ಗಳನ್ನು ಸರಬರಾಜು ಮಾಡಲಾಗಿದೆ. 19 ಬ್ಯಾಚ್ ಗಳಲ್ಲಿ BET ಪರೀಕ್ಷೆಗಾಗಿ BMCRI ಗೆ 10 ಬ್ಯಾಚ್‌ಗಳು ಕಳುಹಿಸಲಾಗಿದ್ದು, BMCRI ನಲ್ಲಿ 5 ಬ್ಯಾಚ್‌ಗಳನ್ನು ಪರೀಕ್ಷಿಸಲಾಗಿ 4 ಬ್ಯಾಚ್‌ಗಳು ಉತ್ತಮ ಗುಣಮಟ್ಟದ ಔಷಧಗಳೆಂದು ಮತ್ತು 1 ಬ್ಯಾಚ್ ಉತ್ತಮ ಗುಣಮಟ್ಟವಲ್ಲದ ಔಷಧವೆಂದು (NSQ) ಘೋಷಿಸಲಾಗಿದೆ.
* NABL ಮಾನ್ಯತೆ ಪಡೆದ M/s. Vimta lab, Hyderabad ನಲ್ಲಿ 9 ಬ್ಯಾಚ್ ಗಳನ್ನು BET ಪರೀಕ್ಷೆಗೆ ಒಳಪಡಿಸಿದ್ದು, 3 ಬ್ಯಾಚ್‌ಗಳು ಉತ್ತಮ ಗುಣಮಟ್ಟದ ಔಷಧಗಳೆಂದು ಮತ್ತು 6 ಬ್ಯಾಚ್‌ಗಳು ಗುಣಮಟ್ಟವಲ್ಲದ ಔಷಧವೆಂದು ಘೋಷಿಸಲಾಗಿದೆ.
* ಔಷಧ ನಿಯಂತ್ರಣ ಇಲಾಖೆಯಿಂದ ಬಳ್ಳಾರಿಯ 19 ಬ್ಯಾಚ್‌ಗಳನ್ನು BET ಪರೀಕ್ಷಗೆ ಒಳಪಡಿಸಿದ್ದು, ಅವುಗಳಲ್ಲಿ 17 ಬ್ಯಾಚ್‌ಗಳು ಉತ್ತಮ ಗುಣಮಟ್ಟದ ಔಷಧಗಳೆಂದು ಮತ್ತು 2 ಬ್ಯಾಚ್‌ಗಳು ಉತ್ತಮ ಗುಣಮಟ್ಟವಲ್ಲದ ಔಷಧವೆಂದು (NSQ) ಘೋಷಿಸಲಾಗಿದೆ.. ಇನ್ನುಳಿದ ಬ್ಯಾಚ್‌ಗಳನ್ನು ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.
* ಸದರಿ Ringer Lactate IV Fluid ಗಳನ್ನು ಎಲ್ಲಾ ಆಸ್ಪತ್ರೆಗಳಿಂದ KSMSCL ಜಿಲ್ಲಾ ಉಗ್ರಾಣಗಳಿಗೆ ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಲೇ 97 ಬ್ಯಾಚ್ ಗಳ ಮಾದರಿಗಳನ್ನು ಪರೀಕ್ಷೆಗಾಗಿ BMCRI ಗೆ ಕಳುಹಿಸಲಾಗಿದ್ದು ಪರೀಕ್ಷೆ ಕಾರ್ಯ ಪ್ರಗತಿಯಲ್ಲಿರುತ್ತದೆ.
* M/s. Paschim Banga Pharmaceutical Ltd Ringer Lactate IV Fluid ಔಷಧವನ್ನು ಕಪ್ಪುಪಟ್ಟಿಗೆ (Black list) ಸೇರಿಸಿ ಆದೇಶಿಸಲಾಗಿರುತ್ತದೆ. NABLಮಾನ್ಯತೆ ಪಡೆದ KSMSCL ನ empenelled ಪ್ರಯೋಗಾಲಯವು ಉತ್ತಮ ಗುಣಮಟ್ಟದ ಔಷಧಿ ಎಂದು ಪ್ರಮಾಣೀಕರಿಸಿದ ಔಷಧವನ್ನು ಔಷಧ ನಿಯಂತ್ರಣ ಇಲಾಖೆಯು ಉತ್ತಮ ಗುಣಮಟ್ಟವಲ್ಲದ ಔಷಧ ಎಂದು ಪ್ರಮಾಣೀಕರಿಸಿರುತ್ತದೆ. ಈ ಕಾರಣದಿಂದ KSMSCL ಪರೀಕ್ಷೆ ಮಾಡಿ ಗುಣಮಟ್ಟ ಪ್ರಮಾಣೀಕರಿಸಿದ ಪ್ರಯೋಗಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಲು ಔಷಧ ನಿಯಂತ್ರಣ ಇಲಾಖೆಯನ್ನು ಕೋರಲಾಗಿದೆ. ಸದರಿ ಪರಿಶೀಲನಾ ವರದಿಯ ಆಧಾರದ ಮೇಲೆ ಪ್ರಯೋಗಾಲಯಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆ ಕ್ರಮವಹಿಸಲಾಗುವುದು.
* ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು KSMSCL ನಿಂದ M/S Paschim Banga Pharmaceutical Ltd ಸಂಸ್ಥೆಗೆ ನೋಟಿಸ್ ನೀಡಲಾಗಿರುತ್ತದೆ.
* ದಿನಾಂಕ 30/11/2024 ರಂದು ನಡೆದ Zoom meeting ನಲ್ಲಿ ಬಳ್ಳಾರಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಸದರಿ ಔಷಧದ ಅಡ್ಡಪರಿಣಾಮದ ಕುರಿತು ಮಾಹಿತಿ ನೀಡಿದರು. M/S Paschim Banga Pharmaceutical Ltd Dextrose with Sodium Chloride ಔಷಧವನ್ನು ಔಷಧ ನಿಯಂತ್ರಣ ಇಲಾಖೆಯಿಂದ ಗುಣಮಟ್ಟದ ವಿಶ್ಲೇಷಣೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎರಡು ಬ್ಯಾಚ್ ಗಳು NSQ ಎಂದು ವರದಿ ಬಂದಿದ್ದರಿಂದ ಸದರಿ ಸಂಸ್ಥೆಯ Dextrose with Sodium Chloride ಔಷಧವನ್ನು ಕಪ್ಪುಪಟ್ಟಿಗೆ ಸೇರಿಸುವ ಕುರಿತು ನೋಟಿಸ್ ನೀಡಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ಸಂಸ್ಥೆ ಪೂರೈಸಿದ ಇತರೆ ಔಷಧಗಳನ್ನು ಉಪಯೋಗಿಸದಂತೆ ದಿನಾಂಕ 30/11/2024 ರಂದು ತಾತ್ಕಾಲಿಕವಾಗಿ ತಡೆಹಿಡಿಯಲಾಗಿರುತ್ತದೆ. ಮುಂದುವರೆದು M/S Paschim Banga Pharmaceutical Ltd ಸಂಸ್ಥೆಯು ಸರಬರಾಜು ಮಾಡಿರುವ Dextrose with Sodium Chloride ಔಷಧವನ್ನು ಕಪ್ಪುಪಟ್ಟಿಗೆ ಸೇರಿಸಿ ಆದೇಶಿಸಲಾಗಿರುತ್ತದೆ.