ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರ ಮೇಲೆ ಜಮೀನು ಕಬಳಿಕೆ ಆರೋಪ
14/12/2024, 19:32
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು, ನಮ್ಮ 2 ಎಕರೆ ಜಮೀನನ್ನು ಕಬಳಿಸುತ್ತಿದ್ದು, ವಿರೋಧಿಸಿದ್ದಕ್ಕೆ ಅವರ ಆಪ್ತ ಸಹಾಯಕರಿಂದ ಹಲ್ಲೆ ಮಾಡಿಸಿದ್ದಾರೆ ಎಂದು ರೈತ ಕೆ.ಮಧು ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ದಶಕಗಳ ಹಿಂದೆ 2004ರಲ್ಲಿ ವೈ.ಎಂ.ಸತೀಶ್ ಅವರ ತಂದೆ ಕಂಪ್ಲಿ ತಾಲೂಕು ನ.2 ಮುದ್ದಾಪುರ ಬಳಿ 66 ಎಕರೆ ಜಮೀನು ಖರೀದಿಸಿದ್ದರು. ಅದರ ಪಕ್ಕದಲ್ಲೇ 1972 ರಲ್ಲಿ ನಮ್ಮ ತಂದೆ ಖರೀದಿಸಿದ್ದ ನಾಲ್ಕು ಎಕರೆ ಜಮೀನು ಇದೆ. ಇದರಲ್ಲಿ ಎರಡು ಎಕರೆ ಜಮೀನನ್ನು ನಾನು ನನ್ನ ತಂಗಿಗೆ 2013 ರಲ್ಲಿ ಬರೆದುಕೊಟ್ಟಿದ್ದೇನೆ ಎಂದು ವಿವರಿಸಿದರು.
ಹಿಂದೆ ವೈ.ಎಂ.ಸತೀಶ್ ಅವರಿಗೂ ನನಗೂ ಚೆನ್ನಾಗಿ ಇದ್ದಾಗ ಅವರಿಂದ ನಾನು 10 ಲಕ್ಷ ರೂ.ಸಾಲ ಕೇಳಿದ್ದೆ. ಅದಕ್ಕೆ ಅವರು 6 ಲಕ್ಷ ರೂ. ಚೆಕ್ ಮೂಲಕ ನೀಡಿದ್ದರು. ಇದಕ್ಕೆ ನನ್ನ ಎರಡು ಎಕರೆ ಜಮೀನನ್ನು ಜಾಮೀನಾಗಿ ಅವರಿಗೆ ನೀಡಿದ್ದೇನೆ. ಆ ಕುರಿತ ದಾಖಲೆಗಳನ್ನು ತಿದ್ದಿ 10 ಲಕ್ಷ ಬದಲಿಗೆ 38 ಲಕ್ಷ ಎಂದು ಬರೆದು ಕೊಂಡಿದ್ದಾರೆ. ಜೊತೆಗೆ ನನ್ನ ಎರಡು ಎಕರೆ ಜಮೀನಿನೊಂದಿಗೆ ನನ್ನ ತಂಗಿಗೆ ನೀಡಿದ್ದ ಎರಡು ಎಕರೆ ಜಮೀನನ್ನು ಸಹ ಕಬಳಿಸಿದ್ದಾರೆ. ಈಚೆಗೆ ಕಂಪ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಮೀನು ನೋಂದಾಯಿಸುತ್ತಿದ್ದಾಗ ನಾನು ವಿರೋಧ ವ್ಯಕ್ತಪಡಿಸಿದರೂ ಅಧಿಕಾರಿಗಳು ಕ್ಯಾರೆ ಎನ್ನಲಿಲ್ಲ. ಈಚೆಗೆ ನಾನು ಬೈಕ್ ನಲ್ಲಿ ಹೋಗುತ್ತಿದ್ದಾಗ, ಕಾರಲ್ಲಿ ಬಂದ ಸತೀಶ್ ಅವರ ಆಪ್ತ ಸಹಾಯಕರಾದ ಚನ್ನನಗೌಡ, ವೀರೇಶಪ್ಪ, ಚನ್ನವೀರ ಎನ್ನುವವರು ಡೋರ್ ತಗುಲಿಸಿ ಹೋಗಿದ್ದು, ಕೆಳಗೆ ಬಿದ್ದ ನನಗೆ ತಲೆಗೆ ಗಾಯವಾಗಿ, ಪ್ರಜ್ಞೆ ತಪ್ಪಿದ್ದೇನೆ. ನಂತರ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ಸತೀಶ್ ವಿರುದ್ಧ ಆರೋಪಿಸಿದ್ದಾರೆ.
ಎಂಎಲ್ ಸಿ ವೈ.ಎಂ.ಸತೀಶ್ ಅವರಿಗೆ ಯಾರು ಯಾರು ಬೆನಾಮಿಗಳು ಇದ್ದಾರೆ ಎಂಬುದು ನನಗೆ ಗೊತ್ತು. ಇದಕ್ಕಾಗಿಯೇ ಸತೀಶ್ ತಮ್ಮನೇ ಅವರ ವಿರುದ್ಧ ಖುದ್ದು ಹೋರಾಟ ಮಾಡುತ್ತಿದ್ದಾನೆ.
ಇವರ ಬೆನಾಮಿಗಳನ್ನು ನಾನು ಎಲ್ಲಿ ಅವರ ತಮ್ಮನಿಗೆ ತಿಳಿಸುತ್ತೇನೆ ಎಂಬ ಆತಂಕದಿಂದ ಅವರು ನನಗೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ.
ಅವರ ಆಪ್ತರಿಂದ ದೂರವಾಣಿ ಕರೆ ಮಾಡಿಸಿ ಬೆದರಿಕೆಯೊಡ್ಡುತ್ತಾರೆ. ನಾನು ಎಲ್ಲಿಗೆ ಹೋದರೂ, ಹಿಂಬಾಲಿಸುತ್ತಾರೆ. ಇದೀಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರೂ, ಅವರ ಹಿಂಬಾಲಕರು ಬಂದು ಮೊಬೈಲ್ ಗಳಲ್ಲಿ ವೀಡಿಯೋ ಮಾಡಿ ಅವರಿಗೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಸತೀಶ್ ಅವರಿಂದ ನನಗೆ ಜೀವ ಬೆದರಿಕೆಯಿದ್ದು, ನನಗೆ ಏನಾದರೂ ಆದರೆ ಅವರೇ ಕಾರಣ ಎಂದು ಅವರು ಅಳಲು ತೋಡಿಕೊಡಿದ್ದಾರೆ. ಈ ಕುರಿತು ಕಂಪ್ಲಿ ಠಾಣೆಯಲ್ಲಿ ದೂರು ನೀಡಿದರೂ, ಪೊಲೀಸರಿಂದ ಸರಿಯಾದ ಕ್ರಮವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ರಾಜಕಾರಣಿ ರಾಜೀನಾಮೆ ನೀಡಬೇಕು ಎಂದು ಅಗ್ರಹ ಮಾಡಿದರು ಈ ರಾಮಾಂಜನೇಲು, ಭಾಗ್ಯಮ್ಮ ಮುಂತಾದವರು ಉಪಸ್ಥಿತರಿದ್ದರು.