ಇತ್ತೀಚಿನ ಸುದ್ದಿ
ಅರಸೀಕೆರೆ ತರಕಾರಿ ಮಾರುಕಟ್ಟೆಯಲ್ಲಿ ಶೀತಲ ಗೃಹ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್
14/12/2024, 14:08

ಬೆಳಗಾವಿ(reporterkarnataka.com): ಆರ್ಥಿಕ ಇಲಾಖೆ ಅನುಮೋದನೆ ದೊರೆತ ನಂತರ ಅರಸೀಕೆರೆ ತರಕಾರಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೋಟಗಾರಿಕೆ ಬೆಳೆ, ಪುಷ್ಪೋದ್ಯಮ, ಮೆಣಸಿನಕಾಯಿ ಆವಕ ಹೆಚ್ಚು ಇರುವ ಮಾರುಕಟ್ಟೆಗಳಲ್ಲಿ ಶೀತಲಗೃಹ ನಿರ್ಮಾಣ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ.
೨೦೨೪-೨೫ನೇ ಸಾಲಿನ ಆರ್ ಐಡಿಎಫ್ -೩೦ ಯೋಜನೆ ಅಡಿಯಲ್ಲಿ ೨೫೪.೫೦ ಕೋಟಿ ರೂ. ಅನುದಾನ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದ್ದು, ೧೪೪.೭೫ ಕೋಟಿ ರೂ. ವೆಚ್ಚದಲ್ಲಿ ಶೀತಲ ಗೃಹ ಮತ್ತಿತರ ಸೌಕರ್ಯ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು.
ಆದರೆ ಬಹುತೇಕ ಸಚಿವರು ಮತ್ತು ಶಾಸಕರಿಂದ ಶೀತಲಗೃಹ ನಿರ್ಮಾಣದ ಕೋರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ೩೫೪.೭೫ ಕೋಟಿ ರೂ. ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪುನಃ ಕೋರಿಕೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.