ಇತ್ತೀಚಿನ ಸುದ್ದಿ
ಎಲೆ ಚುಕ್ಕೆ ರೋಗದಿಂದ 53,977 ಹೆಕ್ಟೇರ್ ಅಡಿಕೆ ಬೆಳೆ ಹಾನಿ: ವಿಧಾನ ಸಭೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
13/12/2024, 18:20
ಬೆಳಗಾವಿ (reporterkarnataka.com): ಎಲೆ ಚುಕ್ಕೆ ರೋಗದಿಂದ ರಾಜ್ಯದಲ್ಲಿ ಸುಮಾರು 53,977 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಿಕೆ ಬೆಳೆಗೆ ಹಾನಿಯಾಗಿದೆ. ರೋಗ ಹರಡದಂತೆ ನಿಯಂತ್ರಣ ಮಾಡಲು ಸರ್ಕಾರ ಶಿವಮೊಗ್ಗ ತೋಟಗಾರಿಕೆ ವಿಶ್ವ ವಿದ್ಯಾಲಯದ ತಜ್ಞರ ನೇತೃತ್ವದ ತಂಡ ರಚನೆ ಮಾಡಿದ್ದು, ಸಂಶೋಧನೆಗೆ ರೂ.50 ಲಕ್ಷ ಅನುದಾನ ಒದಗಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.
ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ವಿಧಾನ ಸಭೆ ಪ್ರಶ್ನೋತ್ತರ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಎಲೆಚುಕ್ಕೆ ರೋಗವು 3 ವಿಧದ ಶಿಲೀಂಧ್ರಗಳಿಂದ ಹರಡುತ್ತಿದೆ. ನೆಲಕ್ಕೆ ಬಿದ್ದ ಗರಿಗಳಲ್ಲಿ ಶಿಲೀಂದ್ರ ಬೆಳವಣಿಯಾಗುತ್ತದೆ. ಮಳೆ ಹನಿಗಳ ಚಿಮ್ಮುವಿಕೆಯಿಂದ ಶಿಲೀಂಧ್ರದ ಕಣಗಳು ಗಾಳಿಯಲ್ಲಿ ಸೇರಿ ಇತರೆ ಗಿಡಗಳು ಹಾಗೂ ತೋಟಗಳಿಗೆ ಹರಡುತ್ತವೆ. ತೇವ ಭರಿತ ಬಿಸಿಲಿನ ವಾತಾವರಣ, 18 ಡಿಗ್ರಿ ಸೆಲಿಯಸ್ ನಿಂದ 24 ಡಿಗ್ರಿ ಕಡಿಮೆ ಉಷ್ಣಾಂಶ ಹಾಗೂ ಹೆಚ್ಚಿನ ಆದ್ರತೆಯ ವಾತಾವರಣದಲ್ಲಿ ರೋಗ ತೀವ್ರವಾಗಿ ಹರಡುತ್ತಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಸರ್ಕಾರ ಎಲೆಚುಕ್ಕೆ ರೋಗದಿಂದ ಹಾನಿಯಾದ ಅಡಿಕೆ ಬೆಳೆಯುವ ರೈತರಿಗೆ ಸಸ್ಯ ಸಂರಕ್ಷಣಾ ಔಷಧಿಗಳಾದ ರೋಗ ನಿಯಂತ್ರಣಕ್ಕಾಗಿ ಹೆಕ್ಸೋಕೋನೊಜೋಲ್, ಟೆಬುಕೊನೊಜೋಲ್ ಮತ್ತು ಪ್ರೋಪಿಕೊನೊಜೋಲ್ ನೀಡಲಾಗುತ್ತಿದೆ. ಇದಕ್ಕಾಗಿ 2023-24ನೇ ಸಾಲಿನಲ್ಲಿ 6,250 ಹೆಕ್ಟೇರ್ ಪ್ರದೇಶದ 12,300 ಅಡಿಕೆ ಬೆಳೆಗಾರರಿಗೆ ರೂ.2.50 ಕೋಟಿ ಅನುದಾನವನ್ನು ನೀಡಲಾಗಿದೆ. ಸಂಪ್ರದಾಯಕವಾಗಿ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಅಡಿಕೆ ಬೆಳೆ ಕಟಾವು ಹಾಗೂ ಸಿಂಪರಣೆಗಾಗಿ ದೋಟಿ ಖರೀದಿಸಲು ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ.40 ರಷ್ಟು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯಡಿ 2023-24ನೇ ಸಾಲಿಗೆ 1,201 ಫಲಾನುಭವಿಗಳಿಗೆ ರೂ.3.66 ಕೋಟಿ ಸಹಾಯಧನ ನೀಡಲಾಗಿದೆ. ರೋಗದ ನಿಯಂತ್ರಣ ಕುರಿತು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವ ವಿದ್ಯಾಲಯದ ತಜ್ಞರ ಸಹಯೋಗದಲ್ಲಿ ರೈತರಿಗೆ ತರಬೇತಿ, ಪ್ರಾತ್ಯಕ್ಷತೆಗಳನ್ನು ನೀಡಿ, ಮಾಹಿತಿ ಹಾಗೂ ಪ್ರಚಾರ ಕಾರ್ಯ ಮಾಡಲಾಗುತ್ತಿದೆ. ರೋಗದ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ವೈಜ್ಞಾನಿಕ ತಂಡ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ತಾಂತ್ರಿಕ ಸಲಹೆಗಳನ್ನು ನೀಡಿದೆ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ರೂ.225.73 ಕೋಟಿ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಶಾಸಕರಾದ ಭೀಮಣ್ಣ ಟಿ ನಾಯಕ್, ಆರಗ ಜ್ಞಾನೇಂದ್ರ ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಇತರೆ ಶಾಸಕರು, ಸರ್ಕಾರ ರೋಗ ತಡೆಗೆ ಉಚಿತವಾಗಿ ಔಷಧೋಪಚಾರಗಳನ್ನು ನೀಡಬೇಕು. ಅಡಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಹರಿಹರ ನಗರದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಹೊಸ ಕಟ್ಟ ನಿರ್ಮಾಣಕ್ಕೆ ರೂ.45 ಲಕ್ಷ ಅನುದಾನ ನೀಡಲಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಹರೀಶ್.ಬಿ.ಪಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಅವಿನಾಶ್ ಉಮೇಶ್ ಜಾದವ್ ಅವರು, ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ 2 ಹೆಕ್ಟೇರ್ ಭೂಮಿ ಹೊಂದಿರುವ ಎಲ್ಲಾ ವರ್ಗದ ರೈತರಿಗೆ ಶೇ.90 ರಷ್ಟು ಹಾಗೂ 2 ಹೆಕ್ಟೇರ್ ನಿಂದ 5 ಹೆಕ್ಟೇರ್ ವರೆಗಿನ ಜಮೀನು ಹೊಂದಿರುವ ರೈತರಿಗೆ ಶೇ.45 ರಷ್ಟು ಸಹಾಯಧನ ನೀಡುತ್ತಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಶಾಸಕ ರವಿಕುಮಾರ್ ಗೌಡ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಉಚಿತವಾಗಿ ತೆಂಗಿನ ಸಸಿಗಳನ್ನು ನೀಡುವಂತೆ ಮನವಿ ಮಾಡಿದರು.