ಇತ್ತೀಚಿನ ಸುದ್ದಿ
ವನ್ಯಜೀವಿ ಕೊಲ್ಲಲು ಅನುಮತಿ ಕೇಳಿದ ಶಾಸಕ ಹರೀಶ್ ಪೂಂಜ ನಡೆ ದುರದೃಷ್ಟಕರ: ವಿಧಾನಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಖೇದ
12/12/2024, 21:10
ಬೆಳಗಾವಿ(reporterkarnataka.com) ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆ ಆಗುತ್ತಿದ್ದು, ಆನೆಗಳನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ದುರದೃಷ್ಟಕರ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಅವರು, ರಾಜ್ಯ ಸರ್ಕಾರ ಆನೆಗಳ ಹಾವಳಿ ತಡೆಗೆ ಕಳೆದ 2 ವರ್ಷಗಳಲ್ಲಿ 489.46 ಮೀ. ಸೌರಬೇಲಿ, 284.82 ಆನೆ ತಡೆ ಕಂದಕ ನಿರ್ಮಾಣ ಮತ್ತು ನಿರ್ವಹಣೆ ಮಾಡಲಾಗುತ್ತಿದೆ, ಜೊತೆಗೆ ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8 ಆನೆ ಕಾರ್ಯಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ರೇಡಿಯೋ ಕಾಲರ್ ಅಳವಡಿಸಿ ಆನೆಗಳ ಚಲನವಲನ ಗಮನಿಸಲಾಗುತ್ತಿದೆ. ಕಾಡಿನಂಚಿನ ಜನರಿಗೆ ಈ ಬಗ್ಗೆ ನಿತ್ಯ ಸಂದೇಶಗಳ ಮೂಲಕ, ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಕೃತಕಬುದ್ಧಿಮತ್ತೆ ಆಧಾರಿತ ಕ್ಯಾಮರಾ ಅಳವಡಿಸಿ ವನ್ಯಜೀವಿಗಳ ಸಂಚಾರದ ಮೇಲೆ ನಿಗಾ ಇಡಲಾಗಿದೆ ಎಂದೂ ತಿಳಿಸಿದರು.
ವನ್ಯಜೀವಿ ದಾಳಿಯಿಂದ ಪ್ರಾಣಹಾನಿ ಆದಾಗ ಕುಟುಂಬದ ಸದಸ್ಯರಿಗೆ 15 ಲಕ್ಷ ರೂ., ಶಾಶ್ವತ ಅಂಗವಿಕಲತೆ ಉಂಟಾದರೆ 10 ಲಕ್ಷ ರೂ., ಭಾಗಶಃ –(ಶಾಶ್ವತವಾದ) ಅಂಗವಿಕಲತೆ ಉಂಟಾದರೆ 5 ಲಕ್ಷ ರೂ. ಗಾಯಗೊಂಡ ವ್ಯಕ್ತಿಗೆ 60 ಸಾವಿರ ರೂ. ಕಾಡಾನೆ ದಾಳಿಯಿಂದ ಆಸ್ತಿಪಾಸ್ತಿಗೆ ಹಾನಿ ಉಂಟಾದರೆ ಪ್ರತಿ ಪ್ರಕರಣಕ್ಕೆ 20 ಸಾವಿರ ರೂ. ದಯಾತ್ಮಕ ಪರಿಹಾರ ನೀಡಲಾಗುತ್ತಿದೆ. ಇದರ ಜೊತೆಗೆ ಮೃತರ ಕುಟುಂಬಕ್ಕೆ ಮತ್ತು ಶಾಶ್ವತ ಅಂಗವಿಕಲರಾದವರಿಗೆ ಮಾಸಿಕ 4 ಸಾವಿರ ರೂ. ಮಾಸಾಶನವನ್ನು 5 ವರ್ಷಗಳ ಕಾಲ ನೀಡಲಾಗುತ್ತಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.