ಇತ್ತೀಚಿನ ಸುದ್ದಿ
ಬಾಣಂತಿಯರ ಸಾವು ಸರಕಾರಿ ಪ್ರಾಯೋಜಿತ ಕೊಲೆ: ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಆರೋಪ
07/12/2024, 15:50

ಗಣೇಶ್ ಇನಾಂದರ ಬಳ್ಳಾರಿ
info.reporterkarnataka@gmail.com
ಬಳ್ಳಾರಿಯಲ್ಲಿ ಸಂಭವಿಸಿರುವ ಬಾಣಂತಿಯರ ಸರಣಿ ಸಾವುಗಳು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಸಿ. ಮಂಜುಳಾ ಆರೋಪಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಶನಿವಾರ ಭೇಟಿ ನೀಡಿದ್ದ ಬಿಜೆಪಿ ನಿಯೋಗದ ನೇತೃತ್ವ ವಹಿಸಿದ್ದ ಅವರು, ಆಸ್ಪತ್ರೆ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
‘ಆರೋಗ್ಯವಾಗಿದ್ದ ಬಾಣಂತಿಯರೇ ಇಲ್ಲಿ ಮೃತಪಟ್ಟಿದ್ದಾರೆ. ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ. ಈ ಸರ್ಕಾರಕ್ಕೆ ಜನರ ಆರೋಗ್ಯದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಅಧಿಕಾರ ಬಡಿದಾಟದಲ್ಲೇ ಸರ್ಕಾರ ಮುಳುಗಿ ಹೋಗಿದೆ. ಆರೋಗ್ಯ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಇದುವರೆಗೂ ಇಲ್ಲಿಗೆ ಭೇಟಿ ನೀಡುವ ಸೌಜನ್ಯ ತೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತ ಬಾಣಂತಿಯರ ಕುಟುಂಬಗಳಿಗೆ ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಈ ಸರ್ಕಾರಕ್ಕೆ ಸ್ವಲ್ಪವೂ ವಿವೇಕವಿಲ್ಲ. ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎನ್ನುವ ಪರಿಜ್ಞಾನವೂ ಇಲ್ಲ. ಜಿಲ್ಲಾ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವ ವ್ಯವದಾನವೂ ಈ ಸರಕಾರಕ್ಕೆ ಇಲ್ಲ’ ಎಂದು ಆರೋಪಿಸಿದರು.
ಮೃತ ಬಾಣಂತಿಯರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ತಬ್ಬಲಿಯಾದ ಶಿಶುಗಳ ಪೋಷಣೆಗೆ ಸರ್ಕಾರ ಸಹಾಯ ಮಾಡಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದ್ದಾರೆ.