ಇತ್ತೀಚಿನ ಸುದ್ದಿ
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು: ಸಾವಿನ ಸಂಖ್ಯೆ 5ಕ್ಕೆ ಏರಿಕೆ
06/12/2024, 12:47

ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‌ಗೆ ಒಳಗಾಗಿದ್ದ
ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೂಡ್ಲಿಗಿಯ ಸುಮಯಾ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಇದರಿಂದ ಬಾಣಂತಿಯರ ಸರಣಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಸುಮಯಾ ಅವರು ನವೆಂಬರ್ 11ರಂದು ಹೆರಿಗೆಗೆಂದು ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಅವರಿಗೆ ಸಿಸೇರಿಯನ್ ಮಾಡಲಾಗಿತ್ತು. ಆ ಬಳಿಕ ತೀವ್ರ ಅಸ್ವಸ್ಥಗೊಂಡ ಅವರನ್ನು ಮರುದಿನ ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (ವಿಮ್ಸ್) ದಾಖಲಿಸಲಾಗಿತ್ತು.
ಬಹು ಅಂಗಾಂಗ ವೈಫಲ್ಯದ ಸಮಸ್ಯೆಗೆ ತುತ್ತಾಗಿದ್ದ ಅವರನ್ನು 24 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತಿತ್ತು. ಬಹುತೇಕ ಚೇತರಿಸಿಕೊಂಡಿದ್ದರೂ ಕಿಡ್ನಿ ಸಮಸ್ಯೆ ಪರಿಹಾರ ಆಗಿರಲಿಲ್ಲ. ಬೆಂಗಳೂರಿಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಬೇಕು ಎಂದು ವಿಮ್ಸ್ ವೈದ್ಯರ ತಂಡ ನಿರ್ಧರಿಸಿತ್ತು. ಆದರೆ ಗುರುವಾರ ರಾತ್ರಿ 8ರ ಸುಮಾರಿನಲ್ಲಿ ಏಕಾಏಕಿ ರಕ್ತದೊತ್ತಡ ಕುಸಿದು ಅವರ ಆರೋಗ್ಯ ಏರುಪೇರಾಯಿತು ಎನ್ನಲಾಗಿದೆ. ಜೀವ ರಕ್ಷಕ ನೀಡಿ, ಪಿಸಿಆರ್ ಮಾಡಿದ ಹೊರತಾಗಿಯೂ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ತಿಳಿಸಿದರು.
*ಶಿಶು ಸಾವು:* ವಿಮ್ಸ್‌ನಲ್ಲಿ ಗುರುವಾರ ನವಜಾತ ಶಿಶುವೊಂದು ಮೃತಪಟ್ಟಿದೆ. ಬಾಣಂತಿ ಗಂಗೋತ್ರಿ ಕುಟುಂಬಸ್ಥರು, ‘ಇದು ವೈದ್ಯರ ನಿರ್ಲಕ್ಷ್ಯ’ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ವಿಮ್ಸ್, ‘ಮಗು ಹೊಟ್ಟೆಯಲ್ಲಿರುವಾಗಲೇ ಉಸಿರಾಟದ ಸಮಸ್ಯೆಯಾಗಿತ್ತು’ ಎಂದು ಹೇಳಿದ್ದಾರೆ.