ಇತ್ತೀಚಿನ ಸುದ್ದಿ
ರೋಮ್ ನಲ್ಲಿ ಸ್ಪೀಕರ್ ಯು. ಟಿ. ಖಾದರ್ ಗೆ ಸನ್ಮಾನ: ಕ್ರೈಸ್ತ ಸಂಘಟನೆಗಳಿಂದ ಆಯೋಜನೆ
30/11/2024, 15:33
ರೋಮ್(reporterkarnataka.com): ಶತಮಾನಗಳ ಹಿಂದೆ ಕ್ರೈಸ್ತರು ಭಾರತದ ಗ್ರಾಮೀಣ ಭಾಗದಲ್ಲಿ ಶಾಲೆಗಳ ಸ್ಥಾಪನೆಗೈದು ಸಮಾಜದ ಒಳಿತಿಗಾಗಿ ತಮ್ಮ ಸೇವೆಯನ್ನು ನೀಡಿ ಜನಸಾಮಾನ್ಯರ ಬದುಕನ್ನು ಹಸನುಗೊಳಿಸಿದ್ದರು. ಕ್ರೈಸ್ತರ ಪ್ರಮುಖ ಧಾರ್ಮಿಕ ಕೇಂದ್ರವಾದ ರೋಮ್ ನಲ್ಲಿ ನೀವು ಪಡೆಯುವ ಉನ್ನತ ಶಿಕ್ಷಣ ಮತ್ತು ನಿಮ್ಮ ಸೇವಾ ಮನೋಭಾವ, ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ನಿಮಗೆ ಪ್ರೇರಣೆಯಾಗಲಿ” ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರ ಯು.ಟಿ. ಖಾದರ್ ಹೇಳಿದರು.
ಅವರು ಇಟಲಿಯ ರೋಮ್ ನಲ್ಲಿರುವ ಕರ್ನಾಟಕ ಮೂಲದ ಕ್ರೈಸ್ತ ಸಂಘಟನೆಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಅಂತರ್ ಧರ್ಮೀಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರೋಮ್ ಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಸಂತ ಪೀಟರ್ ಪೊಂತಿಫಿಕಾಲ್ ಕೊಲೆಜ್ ನಲ್ಲಿ ‘ಕೊಂಕಣಿ ಕುಟಾಮ್ ರೋಮ್’ ಮತ್ತು ‘ಕನ್ನಡಿಗರ ಒಕ್ಕೂಟ, ರೋಮ್’ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಪೀಕರ್ ಖಾದರ್ ಭಾಗವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಫಾದರ್ ಜಿಲ್ ಡಿಸೋಜಾ, ಯು.ಟಿ. ಖಾದರ್ ರವರ ಸೇವಾ ಸಾಧನೆಯನ್ನು ವಿವರಿಸಿದರು. ಫಾದರ್ ಜೋವಿನ್ ಸಿಕ್ವೆರಾರವರು ಕೊಂಕಣಿ ಸಂಘಟನೆ ಮತ್ತು ಫಾದರ್ ರಿಚಾರ್ಡ್ ಕನ್ನಡ ಸಂಘಟನೆಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಂತ ಪೀಟರ್ ಪೊಂತಿಫಿಕಾಲ್ ಕೊಲೆಜ್ ನ ರೆಕ್ಟರ್ ಫಾದರ್ ಜೋಸ್ ತಮ್ಮ ಸಂದೇಶ ನೀಡಿ ಶುಭ ಹಾರೈಸಿದರು. ಉಭಯ ಸಂಘಟನೆಗಳ ಪರವಾಗಿ ಖಾದರ್ ಅವರನ್ನು ಸನ್ಮಾನಿಸಲಾಯಿತು.
ಫಾದರ್ ಸೆಬಾಸ್ಟಿಯನ್ ಪ್ರಾರ್ಥನಾ ವಿಧಿ ನೆರವೇರಿಸಿದರು. ಕಾರ್ಯಕ್ರಮದ ಸಂಯೋಜಕ ಫಾದರ್ ಲೋರೆನ್ಸ್ ನೊರೊನ್ಹಾ ಸ್ವಾಗತಿಸಿದರು, ಸಹ-ಸಂಯೋಜಕಿ ವ್ಯಾಟಿಕನ್ ಸಂವಹನ ವಿಭಾಗದ ಧರ್ಮಭಗಿನಿ ಸಿಸ್ಟರ್ ಕಾರ್ಮೆಲ್ ವಂದನಾರ್ಪಣೆಗೈದರು. ಫಾದರ್ ರೊಯ್ಸನ್ ಫೆರ್ನಾಂಡಿಸ್, ಹಿರ್ಗಾನ ಕಾರ್ಯಕ್ರಮವನ್ನು
ನಿರ್ವಹಸಿದರು.