ಇತ್ತೀಚಿನ ಸುದ್ದಿ
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಒಂದು ಹೆಜ್ಜೆ: ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಪೂರ್ವಭಾವಿ ಸಭೆ
19/11/2024, 18:41

ಶಿವು ರಾಠೋಡ್ ಹುಣಸಗಿ ಯಾದಗಿರಿ
info.reporterkarma@gmail.com
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಒಂದು ಹೆಜ್ಜೆ: ರಕ್ಷಣೆ ಮತ್ತು ಪುನರ್ವಸತಿ ಅಭಿಯಾನದ ಅಂಗವಾಗಿ ಪೂರ್ವಭಾವಿ ಸಭೆ ಹಾಗೂ ತಾಲ್ಲೂಕು ಮಟ್ಟದ ಕಾರ್ಯಕಾರಿ ಸಮಿತಿ ಹಾಗೂ ತಾಲ್ಲೂಕು ಮಟ್ಟದ ಕಾರ್ಯಪಡೆ ಸಮಿತಿ ಸಭೆ ಉಪ ತಹಸೀಲ್ದಾರ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ನಂತರ ಮಾತನಾಡಿದ ಪ್ರಥಮ ದರ್ಜೆ ನ್ಯಾಯಾ ದಂಡಾಧಿಕಾರಿಗಳು ಹಾಗೂ ನ್ಯಾಯಾಧೀಶರಾದ ಬಸವರಾಜ ಹೆಚ್ಚುವರಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನವದೆಹಲಿ ಮತ್ತು ಕಾರ್ಮಿಕ ಆಯುಕ್ತರು ಬೆಂಗಳೂರು ಅವರ ಸೂಚನೆಯಂತೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಒಂದು ಹೆಜ್ಜೆ: ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ- 2024ರ ಅಂಗವಾಗಿ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಿ ಶಿಕ್ಷಣ ಮುಂದುವರಿಕೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಅಕ್ಟೋಬರ್ 21 ರಿಂದ ನವೆಂಬರ್ 20ರ ರವರೆಗೆ ರಕ್ಷಣಾ ಕಾರ್ಯಚರಣೆಗೆ ಸರಕಾರದ ಪ್ರತಿಯೊಂದು ಇಲಾಖೆಯು ಕೈಜೊಡಿಸಿದಾಗ ಮಾತ್ರ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ನಾಯಕ ಅವರು ಮಾತಾಡಿ, ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರತಿ ತಿಂಗಳು 15 ತಪಾಸಣೆ ಮತ್ತು ಹಠಾತ್ ದಾಳಿ/ತಪಾಸಣೆ ಆಯೋಜಿಸಿವುದು. ಪ್ರತಿ ತಿಂಗಳು 2 ಕಾನೂನು ಅರಿವು-ನೆರವು ಮತ್ತು ಜನ-ಜಾಗೃತಿ ಕಾರ್ಯಕ್ರಮ ಆಯೋಜಿಸುವುದು. ಶಾಲೆ ಬಿಟ್ಟು ಕೃಷಿ ಮತ್ತು ಇತರೆ ಕೆಲಸಗಳಿಗೆ ಮಕ್ಕಳು ಹೋಗದಂತೆ ಶಾಲಾ ಶಿಕ್ಷಕರಿಂದ ಪಾಲಕ ಪೋಷಕರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಭೆಯ ನಂತರ ನಗರದ ಬಸ್ ನಿಲ್ದಾಣದಿಂದ ಕೆಂಭಾವಿ ಮುಖ್ಯ ರಸ್ತೆಯವರೆಗೂ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್‌ಗಳು ಮತ್ತು ಹೊಟೇಲ್‌ಗಳಲ್ಲಿ ಹಠಾತ್ ದಾಳಿ/ತಪಾಸಣೆ ನಡೆಸಿ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ಮಕ್ಕಳನ್ನು ನೇಮಿಸಿಕೊಳ್ಳದಂತೆ ಕರಪತ್ರ ಹಾಗೂ ಪೋಸ್ಟರ್ ಗಳನ್ನು ನೀಡುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ-ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕ ಮತ್ತು ಆಟೋ-ಪ್ರಚಾರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿದರು.
ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಶಿವಪ್ಪ ಜಮಾದಾರ್ ಮಾತನಾಡಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ರೂ, 20,000 ರೂಗಳಿಂದ 50,000 ರೂ ಗಳವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು.
ಹಠಾತ್ ದಾಳಿ ಸಂದರ್ಭದಲ್ಲಿ ಹುಣಸಗಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸಣ್ಣ ನಾಯಕ, ಕಂದಾಯ ಇಲಾಖೆಯ ಉಪ ತಹಸೀಲ್ದಾರರಾದ ಶ್ರೀಶೈಲ ಮುದ್ನೂರು, ಪೋಲಿಸ್ ಇಲಾಖೆಯ ಪಿ.ಎಸ್.ಐ ಚಂದ್ರಶೇಖರ, ಆರ್.ಎಸ್.ಐ ಭಾಗಣ್ಣ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ ಸಜ್ಜನ್, ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಡಾ|| ಶಾಬು ಪ್ರಾನ್ಸಿಸ್, ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ಅಧ್ಯಕ್ಷ ಶಿವು ರಾಠೋಡ, ನಾಗಯ್ಯ ಭೋವಿವಡ್ಡರ, ಮಾರ್ಗದರ್ಶಿ ಸಂಸ್ಥೆಯ ತಾಯಮ್ಮ ಎಸ್, ಚನ್ನಮ್ಮ ಎಸ್, ಕಾರ್ಮಿಕ ಇಲಾಖೆಯ ಎಲ್,ಎನ್ ಚೌದ್ರಿ, ರಮೇಶ ಕೆಲ್ಲೂರು, ಬಾಲುನಾಯಕ ಉಪಸ್ಥಿತರಿದ್ದರು.