11:17 PM Sunday14 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ನಾಡಿನೆಲ್ಲೆಡೆ ಗೋಪೂಜೆ ಸಂಭ್ರಮ: ಗೋಮಾತೆಗೆ ವಿಶೇಷ ಅಲಂಕಾರ; ನೈವೇದ್ಯ ಜತೆಗೆ ಬಗೆಬಗೆಯ ಖಾದ್ಯ

02/11/2024, 22:33

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ದೀಪಾವಳಿ ಹಬ್ಬದ ಆಚರಣೆಯಲ್ಲಿ ಒಂದಾದ ಗೋಪೂಜೆಯನ್ನು ಇಂದು ನಾಡಿನಾದ್ಯಂತ ಸಂಭ್ರಮ- ಸಡಗರದಲ್ಲಿ ಆಚರಿಸಲಾಯಿತು. ಮಲೆನಾಡು ಹಾಗೂ ಕರಾವಳಿ ಜೆಲ್ಲೆಗಳ ಜತೆಗೆ ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿಯೂ ಗೋವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಲೆನಾಡು ಶಿವಮೊಗ್ಗ ಜೆಲ್ಲೆಯಲ್ಲಿ ಅದರಲ್ಲೂ ತೀರ್ಥಹಳ್ಳಿ ತಾಲೂಕಿನಲ್ಲಿ ಇಂದು ಗೋವುಗಳ ಕುತ್ತಿಗೆಗೆ ಹಸಿ ಅಡಿಕೆ,ಪಚ್ಛತೆನೆ, ಕಿತ್ತಳೆ ಸೊಪ್ಪು,ತುಳಸಿ,ವೀಳ್ಯದೆಲೆ,ಏಲಕ್ಕಿ ಕರೆ,ಬಾಳೆಹಣ್ಣು , ಚಪ್ಪೆ ರೊಟ್ಟಿ ಧಕ್‌ಹಿಂಗಾರ ಹೀಗೆ ಒಂಭತ್ತು ಬಗೆಯ ವಸ್ತುಗಳಿಂದ ಗೋಮಾಲೆಯನ್ನು ಕಟ್ಟಿ ಚೆಂಡು ಹೂವಿನ ಸರ ಧರಿಸಿ,ಉಗಣೆಕಾಯಿ ಸುರಿದ ಮಾಲೆ, ಮೈಗೆ ಕೆಮ್ಮಣ್ಣು, ಜೇಡಿ ಮಿಶ್ರಣದ ವೃತ್ತಾಕಾರವಾಗಿ ಬಣ್ಣ ಬಳಿದ ಅತ್ತಿಂದಿತ್ತ ಓಡಾಡುವ ಹಸುಗಳಿಗೆ ಇಂದು ಶನಿವಾರ ಸಂಭ್ರಮದ ಗೋಪೂಜೆ ಹಬ್ಬ.

ತಾಲೂಕಿನಾದ್ಯಂತ ದೀಪಾವಳಿಯ ಕೊನೆಯ ದಿನ ವಿಶೇಷವಾಗಿ ಆಚರಿಸಲ್ಪಡುತ್ತದೆ. ಇಂದು ಬೆಳಿಗ್ಗೆಯಿಂದ ಕೊಟ್ಟಿಗೆ, ಕೆರೆ, ಕಟ್ಟೆ, ನಲ್ಲಿಕಟ್ಟೆ, ಹಳ್ಳ, ಬಾವಿ ಇತ್ಯಾದಿಗಳ ಸಮೀಪ ಗೋವುಗಳನ್ನು ಕಟ್ಟಿ ಅವುಗಳ ಮೈ ತೊಳೆದು ಅಲಂಕಾರ ಮಾಡಿ ಗೋಪೂಜೆ ಮಾಡುವುದು ಮಲೆನಾಡಿನ ಸಂಪ್ರದಾಯವಾಗಿದೆ.
ಗೋಪೂಜೆಯ ನೈವೇದ್ಯಕ್ಕೆಂದು ವಿಶೇಷವಾಗಿ ಅಕ್ಕಿ ಬೆಲ್ಲ,ಮುಳ್ಳು ಸೌತೆ ಬೆರೆಸಿ ಮಾಡಿದ ಕಡಬು ಹಾಗೂ ಬಗೆಬಗೆಯ ಖ್ಯಾದ್ಯ ತಯಾರಿಸಿ ಅನ್ನವನ್ನು ಸಿದ್ಧಪಡಿಸುವ ರೂಢಿಯಿದೆ. ಕೊಟ್ಟಿಗೆಯಲ್ಲಿ ಗೋಪೂಜೆಯನ್ನು ಮಾಡಿದ ನಂತರ ಗೋವುಗಳಿಗೆಂದೇ ಸಿದ್ಧಪಡಿಸಿದ ನೈವೇದ್ಯವನ್ನು ಗೋವುಗಳಿಗೆ ನೀಡಿ ಅವುಗಳನ್ನು ಉಪಚರಿಸುತ್ತಾರೆ. ಗೋಪೂಜೆಯ ನಂತರ ಇತರೆ ದೇವತೆಗಳಿಗೆಪೂಜೆ ಅರ್ಪಿಸಿ, ಗೋವುಗಳನ್ನು ಹೊರಗೆ ಬಿಟ್ಟು ಜಾಗಂಟೆ ಸದ್ದುಗಳನ್ನು ಮೊಳಗಿಸಿ ದನಗಳನ್ನು ಮೇಯಲು ಓಡಿಸುತ್ತಾರೆ. ಗೋವುಗಳನ್ನು ಹೊರಗಡೆ ಬಿಟ್ಟ ಸಂದರ್ಭದಲ್ಲಿ ಗೊಮಾಲೆಗೆ ಕಟ್ಟಿದ ಬಾಳೆಹಣ್ಣು, ಚಪ್ಪೆ ರೊಟ್ಟಿ ಬಿಚ್ಚಲೆಂದೇ ಅನೇಕರು ಕಾಯುತ್ತಿರುತ್ತಾರೆ. ಅದನ್ನು
ಬಿಚ್ಚಲು ನಡೆಯುವ ಪ್ರಯತ್ನ ಮನರಂಜನೆ ನೀಡುತ್ತದೆ.


ಇಂದು ಮಧ್ಯಾಹ್ನ ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದವರು ಮನೆ ದೇವರಿಗೆ ಪೂಜೆಯನ್ನು ವಿಶೇಷವಾಗಿ ಸಲ್ಲಿಸಿ ಮನೆಯ ಜಗಲಿಯಲ್ಲಿ ಪಳ್ಳೊಳ್ಳಿಯನ್ನು ಕಟ್ಟಿ ಬಲೀಂದ್ರ ಹೂಡಿ ಪೂಜೆ ಮಾಡಿ ಬಲೀಂದ್ರನನ್ನು ನೆನೆದು ಅಕ್ಕಪಕ್ಕದ ಮನೆಯವರಿಗೆ ಕರೆದು ಕೆರ್ಕ ಕೊಡುವುದು ವಾಡಿಕೆ. ನಂತರ ಕೊಟ್ಟಿಗೆ, ಕೃಷಿ ಉಪಕರಣ,
ಯಂತ್ರೋಪಕರಣ,ಬಾವಿ,ತುಳಸಿ,ಭತ್ತ ಸಂಗ್ರಹಿಸಿಡುವ ಕಣಜ, ಹೀಗೆ ಪ್ರತಿಯೊಂದಕ್ಕೂ ಸಾಂಪ್ರದಾಯಿಕವಾಗಿ ಶ್ರದ್ಧೆ ನಿಷ್ಠೆ, ಭಕ್ತಿಯಿಂದ ಪೂಜೆ ನೆರವೇರಿಸುತ್ತಾರೆ. ಅಲ್ಲದೇ ಅಂದು ಸಿಹಿ, ಹೋಳಿಗೆ,ಕಡುಬು ಮಾಡಿ ಸವಿಯುತ್ತಾರೆ. ಸಂಜೆ ಗೋವುಗಳು ತಮ್ಮ ಕೊಟ್ಟಿಗೆಗೆ ಹಿಂಬರುತ್ತಿದ್ದಂತೆ ಗೋವುಗಳನ್ನು ಕಟ್ಟಿ ಗೋವುಗಳಿಗೆ ದೀಪ ಬೆಳಗುತ್ತಾರೆ. ನಂತರ ರೈತಾಪಿ ವರ್ಗದವರು ತಮ್ಮ ತಮ್ಮ ಗದ್ದೆ, ತೋಟ, ಜಮೀನುಗಳಿಗೆ, ಗ್ರಾಮ ದೇವರಿಗೆ, ಬ್ರಹ್ಮ, ಚೌಡಿ, ನಾಗರ ಬನಗಳಿಗೆ ಕತ್ತಲು ಆವರಿಸುತ್ತಿದ್ದಂತೆ ಪುಂಡಿ ಕೋಲು ಹಾಗೂ ಅಡಿಕೆ ದಬ್ಬೆ ಕೋಲುಗಳಿಂದ ಮಾಡಿದ ದೀಪ ಹಚ್ಚಿ ದೀಪ್ ದೀಪೋಳ್ಗೆ, ಲಕ್ಷ್ಮಿ ಕೋಲ್ ದೀಪೋಳ್ಗೆ, ದೇವ್ರ ದೀಪೋಳ್ಗೆ ಎಂದು ಹಿರಿಯರು ಕೂಗುವ ಕೂಗಿಗೆ ಮಕ್ಕಳು ಧ್ವನಿಗೂಡಿಸಿ ಕೂಗುತ್ತಾ ದೀಪ ಹಚ್ಚಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಮೂರು ದಿನಗಳ‌ ಕಾಲ ದೀಪಾವಳಿಯ ಸಂಭ್ರಮ ಪ್ರತಿಯೊಬ್ಬರ ಮನೆಗಳಲ್ಲೂ ಕಳೆಗಟ್ಟುತ್ತದೆ. ಮನೆಯ ಹೊಸ್ತಿಲಿಗೆ ನಿತ್ಯ ಸಂಜೆಯಾಗುತ್ತಿದ್ದಂತೆ ಹಣತೆಯನ್ನು ಹಚ್ಚುತ್ತಾರೆ. ಮಲೆನಾಡಿನ ಭಾಗಗಳಲ್ಲಿ ಅಂಟಿಗೆ-ಪಿಂಟಿಗೆ ತಂಡವನ್ನು ಕಟ್ಟಿ ಮನೆ ಮನೆಗಳಿಗೆ ಜ್ಯೋತಿ ತೆಗೆದುಕೊಂಡು ಹೋಗಿ ಬಾಗಿಲು ತೆಗಿಯೀರಮ್ಮ ನಿಮ್ಮ ಮನೆಗೆ ಜ್ಯೋತಿ ಬಂದೈತೆ ಎಂದು ಹಾಡಿನ ದಾಟಿಯಲ್ಲಿಯೇ ಜನರನ್ನು ಎಬ್ಬಿಸಿ ಬಾಗಿಲನ್ನು ತೆಗೆಸಿ ನಂತರ ಬಂದಂತಹ ಅಂಟಿಗೆ ಪಿಂಟಿಗೆಯ ಜ್ಯೋತಿಯನ್ನು ಮನೆಯವರು ಸ್ವಾಗತಿಸುತ್ತಾರೆ. ನಂತರ ಅಂಟಿಗೆ-ಪಿಂಟಿಗೆ ಹಾಡನ್ನು ಹಾಡಿ ಮನೆಯ ಗೃಹಿಣಿಯು ಮನೆಗೆ ಬಂದ ಬೆಳಕಿನ ಜ್ಯೋತಿಗೆ ಎಣ್ಣೆ ಹಾಕಿ, ಅರಿಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ತಂದಂತಹ ಜ್ಯೋತಿಯಿಂದ ದೀಪವನ್ನು ಹಚ್ಚಿ ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಹಬ್ಬದ ಮಾರನೆಯ ದಿನ ಕರಿ, ನಂತರ ವರ್ಸ್ತಡಿಕೆ ಆಚರಿಸಿ ಕಾರ್ತಿಕ ಮಾಸ ಮುಗಿಯುವವರೆಗೂ ಮನೆಗಳಲ್ಲಿ ಪ್ರತಿದಿನ ಹಣತೆ ಹಚ್ಚುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು