ಇತ್ತೀಚಿನ ಸುದ್ದಿ
ನಂಜನಗೂಡು ತಾಲೂಕು ಆಡಳಿತದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ
01/11/2024, 14:32
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಾಲೂಕು ಆಡಳಿತ ಭವನದ ಮುಂಭಾಗ ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರಾದ ತಹಸಿಲ್ದಾರ್ ಶಿವಕುಮಾರ್ ಕಾಸನೂರು ಮೊದಲಿಗೆ ರಾಷ್ಟ್ರಧ್ವಜವನ್ನು ನಂತರ ಶಾಸಕ ದರ್ಶನ್ ದ್ರುವ ನಾರಾಯಣ್ ಕನ್ನಡ ಬಾವುಟದ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನಂತರ ಕನ್ನಡಾಂಬೆ ಶ್ರೀ ರಾಜರಾಜೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದ ಗಣ್ಯರು
ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್ ಶಿವಕುಮಾರ್ ಅವರು ತಾಲೂಕಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದರು.
ನಂತರ ಶಾಸಕ ದರ್ಶನ್ ಧ್ರುವನಾರಾಯಣ್ ಹಾಗೂ ಮುಖ್ಯ ಭಾಷಣಕಾರರಾಗಿ ಕಬ್ಬಳ್ಳಿ ಸರ್ಕಾರಿ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜಪ್ಪ ಮಾತನಾಡಿ ಹಂಚಿ ಹರಿದು ಹೋಗಿದ್ದ ಕನ್ನಡ ನಾಡನ್ನು ಹಲವಾರು ಮಹಾನುಭಾವರ ತ್ಯಾಗ ಬಲಿದಾನದಿಂದಾಗಿ ಒಗ್ಗೂಡಿಸಲಾಗಿದೆ ಹಾಗಾಗಿ ನಮ್ಮ ಈ ಚೆಲುವ ಕನ್ನಡ ಭಾಷೆ ಸೇರಿದಂತೆ ನಾಡು ನುಡಿ ನೆಲ ಜಲವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದು ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಪರಂಪರೆಯ ಬಗ್ಗೆ ವಿವರಿಸಿದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೂ ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಉಪಾಧ್ಯಕ್ಷೆ ರಿಯಾನ ಬಾನು, ಮುಖಂಡರಾದ ಮಾರುತಿ, ಡಿ ವೈ ಎಸ್ ಪಿ ರಘು , ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಲತಾ ಮುದ್ದಪ್ಪ, ಕನ್ನಡ ಚಳುವಳಿ ಮುಖಂಡ ಶಿವಶಂಕರ್, ಸೇರಿದಂತೆ ನಗರಸಭಾ ಸದಸ್ಯರುಗಳು, ವಿವಿಧ ಪರ ಸಂಘಟನೆಗಳ ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.