ಇತ್ತೀಚಿನ ಸುದ್ದಿ
3ನೇ ಅವಧಿಗೆ ಅಧಿಕಾರಕ್ಕೆ ಬಂದರೂ ಅಚ್ಚೆ ದಿನ್ ಬಂದಿಲ್ಲ: ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನದಲ್ಲಿ ಯಾದವ್ ಶೆಟ್ಟಿ
27/10/2024, 19:00
ಮಂಗಳೂರು(reporterkarnataka.com):ಅಮೆರಿಕವನ್ನು ಮೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ನಲ್ಲಿ ನರಮೇಧ ನಡೆಸುತ್ತಿರುವ ಇಸ್ರೇಲ್ ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಎಂ) ಪ್ರಧಾನ ಕಾರ್ಯದರ್ಶಿ ಯಾದವ್ ಶೆಟ್ಟಿ ಆರೋಪಿಸಿದರು.
ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಮಂಗಳೂರು ನಗರ ದಕ್ಷಿಣ ಸಮ್ಮೇಳನ ಭಾನುವಾರ ನಗರದ ಕೊಟ್ಟಾರ ಚೌಕಿಯ ವಿಎಸ್ ಕೆ ಸಭಾಂಗಣದಲ್ಲಿ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ್ ಶೆಟ್ಟಿ, “ಜಗತ್ತು ಆತಂಕಕಾರಿ ಸ್ಥಿತಿಯಲ್ಲಿದೆ. ಒಂದು ವರ್ಷದಿಂದ ಇಸ್ರೇಲ್ ಪ್ಯಾಲೆಸ್ತೀನ್ ಯುದ್ಧ ನಡೆಯುತ್ತಿದೆ. ಇಸ್ರೇಲ್ ನರಮೇಧದಿಂದ 48,000 ಮಂದಿ ಸಾವನ್ನಪ್ಪಿದ್ದಾರೆ, ಆ ಪೈಕಿ 16,000 ಮಂದಿ ಮಹಿಳೆಯರು ಮತ್ತು ಮಕ್ಕಳು ಆಗಿದ್ದಾರೆ. ಈ ಭೀಕರ ಕ್ರೂರತೆಯನ್ನು ಸಿಪಿಎಂ ಖಂಡಿಸುತ್ತದೆ” ಎಂದು ಹೇಳಿದರು.
“2014ರಲ್ಲಿ ಅಚ್ಚೆ ದಿನ್ ತರುವ, ರೈತರ ಆದಾಯ ದ್ವಿಗುಣಗೊಳಿಸುವ, ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದರು. ಆದರೆ ಈಗ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೂ ಕೂಡ ಭರವಸೆಯನ್ನು ಪೂರೈಸಿಲ್ಲ. ಬದಲಾಗಿ ನೆಲಜಲವನ್ನು ಅಂಬಾನಿ ಅದಾನಿಗೆ ಧಾರೆ ಎರೆದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ವರ್ಷಗಳಿಂದ ಕಮ್ಯೂನಿಸ್ಟ್ ಪಕ್ಷ ನಡೆಸಿದ ಹೋರಾಟದ ಫಲವಾಗಿ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಲಾಗಿತ್ತು. ಆದರೆ ಮೋದಿ ಸರ್ಕಾರ ಈ ಕಾನೂನನ್ನು ರೈತರಿಗೆ ಹಾನಿಯಾಗುವಂತೆ, ಕಾರ್ಪೊರೇಟ್ ಪರವಾಗಿ ಬದಲಾಯಿಸಿದೆ. ಈ ಮರಣ ಶಾಸನದ ವಿರುದ್ಧ ರೈತರು ಒಂದು ವರ್ಷಕ್ಕೂ ಅಧಿಕ ಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ 715 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇಂದಿಗೂ ರೈತರಿಗೆ ನ್ಯಾಯ ದೊರೆತಿಲ್ಲ ಎಂದು ಹೇಳಿದರು.
ಮಂಗಳೂರಿನಲ್ಲಿ ಕೆಂಬಾವುಟ ರಾರಾಜಿಸುತ್ತಿತ್ತು. ಇಂದು ಅದನ್ನು ನಾವು ಮಾರುಕಳಿಸಬೇಕು. ನಗರ ಪಾಲಿಕೆಯ ಭ್ರಷ್ಟಚಾರದ ವಿರುದ್ಧ ಹೋರಾಡಬೇಕಿದೆ. ಕೆಂಬಾವುಟವೇ ಪರ್ಯಾಯ ಎಂಬುದನ್ನು ಜನತೆಗೆ ಮನವರಿಕೆ ಮಾಡಬೇಕಿದೆ ಎಂದು ನಾಯಕರುಗಳಿಗೆ ಕರೆ ನೀಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್, “ಮೂರನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದರೂ ಕೂಡ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಇಂಡಿಯಾ ಮೈತ್ರಿಕೂಟ ಬಿಜೆಪಿಗೆ ಮುಖಭಂಗವಾಗುವಂತೆ ಚುನಾವಣಾ ಪ್ರದರ್ಶನ ತೋರಿದೆ. ಈ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟವನ್ನು ಸ್ಥಾಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ಕಾಂಗ್ರೆಸ್ ಅಲ್ಲ ಸಿಪಿಎಂ ಎಂಬುದು ನಮಗೆ ತಿಳಿದಿರಬೇಕು. ನಮ್ಮ ಪಕ್ಷದ ಅಧಿವೇಶನದಲ್ಲಿ ಮೈತ್ರಿಕೂಟದ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ದೇಶದ ರಾಜಕಾರಣದಲ್ಲಿ ಸಿಪಿಎಂ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಈವರೆಗೂ ನಮ್ಮ ಪಕ್ಷ ಅತೀ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ. ಈ ಹಿಂದೆ ಬ್ರಿಟೀಷರು ನಮ್ಮನ್ನು ಹೊಸಕಿ ಹಾಕುವ ಪ್ರಯತ್ನ ಮಾಡಿದರು. ಆದರೆ ಅದನ್ನು ಎದುರಿಸಿ ನಾವು ಇಂದಿಗೂ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇವೆ. ಯಾವುದೇ ಸರ್ಕಾರವಾದರೂ ಅದು ರೈತ, ಕಾರ್ಮಿಕ ವಿರೋಧಿಯಾದರೆ ಅದರ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ ಮತ್ತು ನಡೆಸುತ್ತಿದ್ದೇವೆ ಎಂದು ಹೇಳಿದರು.
ರಷ್ಯಾದಲ್ಲಿ ಸೋವಿಯತ್ ಸರ್ಕಾರ ಪತನವಾದಾಗ ವಿಶ್ವದಲ್ಲೇ ಮಾರ್ಕ್ಸ್ ವಾದ ಅಂತ್ಯ ಎಂದು ಹಲವು ಮಾಧ್ಯಮಗಳು ವರದಿ ಮಾಡಿತು. ಆದರೆ ಮಾರ್ಕ್ಸ್ ವಾದ ಇಂದಿಗೂ ಪ್ರಸ್ತುತವಾಗಿದೆ. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಹಲವು ತಜ್ಞರು ಇದೇ ಕಾರ್ಲ್ ಮಾರ್ಕ್ಸ್ ಬರೆದ ಪುಸ್ತಕಗಳನ್ನು ಖರೀದಿಸಿದ್ದಾರೆ. ಮಾರ್ಕ್ಸ್ ಪುಸ್ತಕದಲ್ಲಿ ಬಿಕ್ಕಟ್ಟಿಗೆ ಪರಿಹಾರವನ್ನು ಹುಡುಕಿದ್ದಾರೆ. ಅದರ ಅರ್ಥ ಬಂಡವಾಳಶಾಹಿಗಳು ಎಷ್ಟೇ ಪಿತೂರಿ ಬಾರಿಸಿದರೂ ಮಾರ್ಕ್ಸ್ ವಾದ, ಸಮಾಜವಾದ ಅಂತಿಮ ಸತ್ಯ ಎಂದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ. ಬಾಲಕೃಷ್ಣ ಶೆಟ್ಟಿ, ನಗರ ಸಮಿತಿ ಸದಸ್ಯರಾದ ಕಾಂ. ಪದ್ಮಾವತಿ ಶೆಟ್ಟಿ, ಕಾಂ.ಯೋಗೀಶ್ ಜಪ್ಪಿನಮೊಗರು , ಹಿರಿಯ ಸಂಗಾತಿ ಜಯರಾಮ್ ಮಣಿಯಾಣಿ , ಸ್ವಾಗತ ಸಮಿತಿ ಗೌರವಾಧ್ಯಕ್ಷರು ಪದ್ಮನಾಭ ಕೋಟ್ಯಾನ್, ಪ್ರಕಾಶ್ ಕೊಟ್ಟಾರಿ ಅಧ್ಯಕ್ಷರು, ಅಶೋಕ್ ಶ್ರೀಯಾನ್ ಕಾರ್ಯಾಧ್ಯಕ್ಷರು, ಮನೋಜ್ ಕುಲಾಲ್ ಸಂಘಟನಾ ಕಾರ್ಯದರ್ಶಿ , ಪ್ರಶಾಂತ್ ಆಚಾರ್ಯ ಪ್ರಧಾನ ಕಾರ್ಯದರ್ಶಿ, ಖಜಾಂಚಿ ರಾಜೇಶ್ ಉರ್ವಸ್ಟೋರ್ ಉಪಸ್ಥಿತರಿದ್ದರು. ಸಿಪಿಐಎಂ ನಗರ ಕಾರ್ಯದರ್ಶಿ ಕಾಂ. ಸಂತೋಷ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ಆಚಾರ್ಯ ಸ್ವಾಗತಿಸಿದರು. ರಾಜೇಶ್ ಉರ್ವಸ್ಟೋರ್ ಧನ್ಯವಾದ ಸಲ್ಲಿಸಿದರು.