ಇತ್ತೀಚಿನ ಸುದ್ದಿ
ಮಂಗಳೂರು: ಸರ್ಫಾಸಿ ಕಾಯಿದೆ ಮತ್ತು ಕೆನರಾ ಬ್ಯಾಂಕ್ ವಿರುದ್ಧ ಕಾಫಿ ಬೆಳೆಗಾರರ ಪ್ರತಿಭಟನೆ
10/10/2024, 19:46
ಮಂಗಳೂರು(reporterkarnataka.com): ಸರ್ಫಾಸಿ ಕಾಯಿದೆ ಮತ್ತು ಕೆನರಾ ಬ್ಯಾಂಕ್ ವಿರುದ್ಧ ಕರ್ನಾಟಕ ಬೆಳಗಾರರ ಒಕ್ಕೂಟದ ನೇತೃತ್ವದಲ್ಲಿ ಎಲ್ಲ ಸಹ ಸಂಘಟನೆಗಳ ಸಹಕಾರದಿಂದ ಪ್ರತಿಭಟನಾ ಸಭೆಯು ನಗರದ ಕ್ಲಾಕ್ ಟವರ್ ಎದುರು ಗುರುವಾರ ನಡೆಯಿತು.
ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರು ಭಾಗವಹಿಸಿ, ಕಾಫಿ ಕೃಷಿಯನ್ನು ಸರ್ಫೆಸಿ ಕಾಯಿದೆಯಡಿ ತಂದು ಬೆಳೆಗಾರರಿಗೆ ಕಿರುಕುಳ ನೀಡುತ್ತಿರುವ ಕೆನರಾ ಬ್ಯಾಂಕ್‌ನ ರೈತ/ ಬೆಳೆಗಾರರ ವಿರೋಧಿ ಮನಸ್ಥಿತಿಯ ಕೆಲವು ಉನ್ನತ ಅದಿಕಾರಿಗಳ ಸರ್ವಾಧಿಕಾರಿ ಧೋರಣೆ ವಿರುದ್ಧ ಘೋಷಣೆ ಕೂಗಿ, ಸಂಘಟನೆ ಪ್ರತಿನಿಧಿಗಳು ಮಾತನಾಡಿದರು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ರೈತರು ದೇಶದ ಬೆನ್ನುಲುಬಾಗಿದ್ದಾರೆ. ಕಾಫಿ ಬೆಳೆಗಾರರೆಂದರೆ ದೊಡ್ಡ ಶ್ರೀಮಂತರೆಂಬ ಭಾವನೆ. ಅಲ್ಲೂ ಸಣ್ಣ ರೈತರು, ಸಂಕಷ್ಟವಿದೆ. ಈಗಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಸಚಿವರು, ಅದಿಕಾರಿಗಳ ಗಮನ ಸೆಳೆಯುವುದಾಗಿ ಹೇಳಿದರು.
ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಡಿ.ಮನೋಹರ್, ಮುಖಂಡರಾದ ದೀಪಕ್ ದೊಡ್ಡಯ್ಯ, ನಿಡುವಾಳೆ ಚಂದ್ರುö, ಹದ್ದೂರಿ ಕುಮಾರ್, ಲೋಹಿತ್, ಕೃಷ್ಣ ಕೆಜಿಎಫ್, ಮಲ್ಲೇಶ್, ಬಿ.ಸಿ.ದಯಕರ್, ಮತ್ತಿತರರು ಮಾತನಾಡಿದರು.
ಈಗಾಗಲೇ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವ ಕಾಫಿ ಬೆಳೆಗಾರರಿಗೆ ಈಗ ಸಾಲ ಹಾಗೂ ಸುಸ್ತಿ ಸಾಲದ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದೆ, ಸರ್ಫಾಸಿ ಕಾಯಿದೆ ನೆಪದಲ್ಲಿ ಬೆಳೆಗಾರರ ಆಸ್ತಿ ಹರಾಜು ಹಾಕುತ್ತಿರುವ ಬ್ಯಾಂಕ್‌ಗಳ ನೀತಿ ವಿರುದ್ಧ ಹೋರಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಳೆಗಾರರ ಸಮಸ್ಯೆಗಳನ್ನು ಕುರಿತು ತಿಳಿದಿರುವ ಬಹುತೇಕ ಎಲ್ಲ ಬ್ಯಾಂಕ್‌ಗಳು ಬೆಳೆಗಾರರ ಹಿತರಕ್ಷಣೆ ದೃಷ್ಟಿಯಿಂದ ಸಾಲ ಮರುಪಾವತಿಗೆ ಸಮಯಾವಕಾಶ ನೀಡಲು ಒಪ್ಪಿ ಬೆಳೆಗಾರರ ಸಹಾಯಕ್ಕೆ ನಿಂತಿವೆ. ಆದರೆ ಕೆನರಾ ಬ್ಯಾಂಕ್ ಮಾತ್ರ ಅತ್ಯಂತ ಅಮಾನವೀಯವಾಗಿ ಬೆಳೆಗಾರರ ವಿರುದ್ಧ ವಸೂಲಾತಿ, ಹರಾಜು ಕ್ರಮ ಜರುಗಿಸುತ್ತಿದೆ.
ಬೆಳೆಗಾರರ ತೋಟಗಳನ್ನು ಕೆಲವೇ ತಿಂಗಳ ನೋಟಿಸ್ ನೀಡಿ ಆನ್‌ಲೈನ್‌ನಲ್ಲಿ ಹರಾಜು ಮಾಡುತ್ತಿದೆ, ಈ ಕುರಿತು ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾಕಾರಿ ಉಪಸ್ಥಿತಿಯಲ್ಲಿ ಜಿಲ್ಲಾ ಲೀಡ್ ಬ್ಯಾಕ್ ಮುಖ್ಯಸ್ಥರ ಮೂಲಕ ಮನವಿ ಸಲ್ಲಿಸಿದ್ದರೂ ಕೂಡ ಕೆನರಾ ಬ್ಯಾಂಕ್ ಅದಿಕಾರಿ ವರ್ಗ ಅತ್ಯಂತ ಉದ್ಧಟತನದಿಂದ ಬೆಳೆಗಾರರ ವಿರುದ್ಧ ಕ್ರಮ ಜರುಗಿಸುತ್ತಲೇ ಬಂದಿದೆ ಎಂದು ಅವರು ಆರೋಪಿಸಿದರು.