ಇತ್ತೀಚಿನ ಸುದ್ದಿ
ಅಕ್ಟೋಬರ್ 1 ಮತ್ತು 2:ಭಾರತೀಯ ಕಥೋಲಿಕ್ ಪತ್ರಕರ್ತರ ಸಂಘಟನೆಯ ಸಮಾವೇಶ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ
29/09/2024, 19:50
ಮಂಗಳೂರು(reporterkarnataka.com): ಭಾರತೀಯ ಕಥೋಲಿಕ ಪತ್ರಕರ್ತರ ಸಂಘಟನೆ ಆಯೋಜಿಸಿರುವ 29ನೇ ವಾರ್ಷಿಕ ಸಮಾವೇಶವು ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಅಕ್ಟೋಬರ್ 1 ಮತ್ತು 2ರಂದು ನಗರದ ನಂತೂರು ಬಳಿಯ ಸಿ ಓ ಡಿ ಪಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ. ಸಮಾವೇಶನವನ್ನು ಮಂಗಳೂರು ಧರ್ಮ ಕ್ಷೇತ್ರದ ಪರಮಪೂಜ್ಯ ಧರ್ಮಾಧ್ಯಕ್ಷರಾದ ಬಿಷಪ್ ಪೀಟರ್ ಪೌಲ್ ಸಲ್ದಾನ ರವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜರವರು ಹಾಗೂ ಬೆಳ್ಳಾರಿ ಧರ್ಮ ಪ್ರಾಂತ್ಯದ ಪರಮ ಪೂಜ್ಯ ಧರ್ಮಾಧ್ಯಕ್ಷರಾದ ಬಿಷಪ್ ಹೆನ್ರಿ ಡಿಸೋಜರವರು ಭಾಗಿಯಾಗಲಿದ್ದಾರೆ ಸಮಾವೇಶವನ್ನು ಮಂಗಳೂರಿನ ಪ್ರಖ್ಯಾತ ಕೊಂಕಣಿ ವಾರಪತ್ರಿಕೆಯಾದ ‘ರಾಕ್ಣೊ’ ಸಂಘಟಿಸಲಿದೆ. ಮೂಡಬಿದ್ರೆಯ ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ಇವರು ಪ್ರಾಯೋಜಿಸುತ್ತಿದ್ದಾರೆ.
ಅಕ್ಟೋಬರ್ 2 ರಂದು ತಜ್ಞ ಮಂಡಳಿಯಿಂದ, ಗಾಂಧೀಜಿಯವರ ತತ್ವಗಳಾದ ಸತ್ಯ ಅಹಿಂಸೆ ಮತ್ತು ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಪತ್ರಕರ್ತರ ಪಾತ್ರ ಎಂಬ ವಿಷಯ ಮಂಡನೆ ನಡೆಯಲಿದೆ.ಕರ್ನಾಟಕ ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿಗಳಾದ ಹೆಚ್. ಎನ್. ನಾಗಮೋಹನ್ ದಾಸ್ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಡಾ. ಪುರುಷೋತ್ತಮ ಬಿಳಿಮಲೆಯವರು, ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರರಾಗಿರುವ ಡಾ. ಅನ್ನಪೂರ್ಣ ಹೆಚ್. ಎಸ್. ಹಾಗೂ ಲೇಖಕ ಮತ್ತು ವಿಚಾರವಾದಿ ಡಾ. ಸೆಡ್ರಿಕ್ ಪ್ರಕಾಶ್ ಎಸ್ ಜೆ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಮುಂಬೈಯ ದ ಎಕ್ಸಾಮಿನಾರ್ ಪತ್ರಿಕೆಯ ಸಂಪಾದಕರಾಗಿರುವ ಜೋಷನ್ ರೊಡ್ರಿಗಸ್ ರವರು ಕಲಾಪವನ್ನು ನಿರ್ವಹಿಸಲಿದ್ದಾರೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನ ಸಭಾಧ್ಯಕ್ಷರಾಗಿರುವ ಯು ಟಿ ಖಾದರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಷಾಯ್ಸನ್ ಟಿ ಯುಸೇಫ್ , ವಿನಾಯಕ ನಿರ್ಮಲ್ ಹಾಗೂ ದಿ ನ್ಯೂ ಲೀಡರ್ ವಾರ ಪತ್ರಿಕೆಗೆ ಉತ್ತಮ ಪತ್ರಿಕೋದ್ಯಮದ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಷ್ಟ್ರಾದ್ಯಂತ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನಾ ಕಾರ್ಯದರ್ಶಿಯವರಾದ ಫಾ. ರೂಪೇಶ್ ಮಾಡ್ತಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.