ಇತ್ತೀಚಿನ ಸುದ್ದಿ
ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿತನ: ಮೊಟ್ಟೆಗಾಗಿ ತಟ್ಟೆ ಹಿಡಿದು ಕುಳಿತ ವಿದ್ಯಾರ್ಥಿಗಳು!
25/09/2024, 21:35
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ವಾರದ 6 ದಿನಗಳಲ್ಲೂ ಮಕ್ಕಳಿಗೆ ಮೊಟ್ಟೆ ನೀಡಬೇಕೆಂದು ಸರ್ಕಾರ ಅದೇಶಿಸಿದ ಹಿನ್ನಲೆಯಲ್ಲಿ ಪಟ್ಟಣದ ಸಿಬಿನಕೆರೆ ಸರ್ಕಾರಿ ಶಾಲೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. ಆದರೆ ಕಾರ್ಯಕ್ರಮದಲ್ಲಿ ಮೊಟ್ಟೆಗಾಗಿ ತಟ್ಟೆ ಹಿಡಿದು ಒಂದು ಘಂಟೆಗೂ ಜಾಸ್ತಿ ಹೊತ್ತು ಕಾದು ಕೂರುವ ಪರಿಸ್ಥಿತಿ ಸಿಬಿನಕೆರೆ ಶಾಲೆಯ ಪುಟ್ಟ ಪುಟ್ಟ ಮಕ್ಕಳಾದ್ದಾಗಿತ್ತು.
ಹೌದು, ತೀರ್ಥಹಳ್ಳಿಯ ಸೀಬಿನಕೆರೆ ಸರ್ಕಾರಿ ಶಾಲೆಯಲ್ಲಿ ಅದರಲ್ಲೂ ಶಾಸಕ ಆರಗ ಜ್ಞಾನೇಂದ್ರ ಅವರು ದತ್ತು ಪಡೆದ ಶಾಲೆಯಲ್ಲಿ ಪೌಷ್ಟಿಕ ಆಹಾರವನ್ನು ನೀಡಲು ಉದ್ಘಾಟನಾ ಕಾರ್ಯಕ್ರಮ ಬುಧವಾರ ಆಯೋಜನೆ ಮಾಡಲಾಗಿತ್ತು. ಆದರೆ ಶಾಸಕರು ಹೊಸನಗರ ಕಾರ್ಯಕ್ರಮಕ್ಕೆ ಹೋಗಿದ್ದ ಕಾರಣ ಸಮಯದ ಅಭಾವದಿಂದ ಶಾಲೆಯ ಪೌಷ್ಟಿಕ ಆಹಾರದ ಉದ್ಘಾಟನೆ ಆಗಮಿಸಲಿಲ್ಲ. ಆದರೂ ಕೂಡ ಮಕ್ಕಳ ಬಗ್ಗೆ ವಿಶೇಷ ಕಾಳಜಿಯಿಂದ ದೂರವಾಣಿ ಮೂಲಕ ಶಾಸಕರು ಕಾರ್ಯಕ್ರಮಕ್ಕೆ ಸಕಾಲಕ್ಕೆ ಬರಲು ಆಗುವುದಿಲ್ಲ ಯಾವುದೇ ಕಾರಣಕ್ಕೂ ಚಿಕ್ಕ ಚಿಕ್ಕ ಮಕ್ಕಳನ್ನು ಕಾಯಿಸುವುದು ಬೇಡ. ನೀವು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಂತರ ಮಾಮೂಲಿ ಕಾರ್ಯಕ್ರಮದಂತೆ, ಪ್ರಾಸ್ತಾವಿಕ ನುಡಿ, ಭಾಷಣ ಎಂದು ಮಕ್ಕಳನ್ನು 1 ಗಂಟೆಗಳ ಕಾಲ ಕಾಯಿಸಲಾಯಿತು. 1 ಗಂಟೆಯ ಬದಲಾಗಿ 2 :15ಕ್ಕೆ ಚಿಕ್ಕ ಚಿಕ್ಕ ಮಕ್ಕಳಿಗೆ ಮೊಟ್ಟೆ ನೀಡಲಾಯಿತು. ಸರಿ ಸುಮಾರು 1 ಗಂಟೆಗೂ ಅಧಿಕ ಕಾಲ ಮೊಟ್ಟೆಗಾಗಿ ಮಕ್ಕಳೆಲ್ಲರೂ ತಟ್ಟೆ ಹಿಡಿದು ಹಸಿವಿನಿಂದ ಕುಳಿತಿದ್ದರು. ಈ ಸಮಯದಲ್ಲಿ ಭಾಷಣ ಬೇಕಾ ಎಂಬಂತೆ ಮಕ್ಕಳ ಮುಖದ ಭಾವನೆ ಹೇಳುತ್ತಿತ್ತು. ಇಂತಹ ಕಾರ್ಯಕ್ರಮದಲ್ಲಿ ಭಾಷಣ ಬೇಡ ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಿದೆ.