ಇತ್ತೀಚಿನ ಸುದ್ದಿ
ಸರಕಾರದ ನೇಮಕಾತಿಯಲ್ಲಿ ಮೀಸಲಾತಿ ಪರಿಗಣಿಸಿ: ಪಂಪಾಪತಿ ಆಗ್ರಹ
21/09/2024, 23:00
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಸರಕಾರದ ನಿಗಮ, ಮಂಡಳಿ, ಸಹಕಾರಿ ಬ್ಯಾಂಕ್, ಸರ್ಕಾರಿ ಹಾಸ್ಟಲ್, ಶಾಲೆ, ಕಾಲೇಜುಗಳಿಗೆ ನಾಮನಿರ್ದೇಶಿತ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಕಲ್ಲುಕಂಬ ಪಂಪಾಪತಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ಮತ್ತು ಸಚಿವರಿಗೆ ಒತ್ತಾಯದ ಮನವಿ ಮಾಡಿದರು.
ರಾಜ್ಯದಲ್ಲಿ 482 ವಿವಿಧ ಸಮಿತಿಗಳಿವೆ. ಅವುಗಳಿಗೆ ತಲಾ ಐದರಂತೆ ನೇಮಕ ಮಾಡಿದರೆ. ರಾಜ್ಯದಲ್ಲಿ ಒಂದು ಲಕ್ಷ ಜನರಿಗೆ ಈ ಅವಕಾಶ ದೊರೆಯಲಿದೆ. ಇವರಿಗೆ ಸರ್ಕಾರದಿಂದ ಯಾವುದೇ ಗೌರವ ಧನ ಬೇಕಿಲ್ಲ. ಕೇವಲ ಗುರುತಿನ ಕಾರ್ಡು ನೀಡಿದರೆ ಸಾಕು ಎಂದಿದ್ದಾರೆ.
ಹೀಗೆ ನಾಮನಿರ್ದೇಶನ ಮಾಡುವಾಗ ಪರಿಶಿಷ್ಟರು, ಮಹಿಳೆಯರು, ಪದವೀಧರರು ಎಂದು ಮೀಸಲಾತಿ ಪರಿಗಣಿಸಬೇಕು. ಹೀಗೆ ಮಾಡಿದರೆ ಬಳ್ಳಾರಿ ಜಿಲ್ಲೆಯ 2,500 ಜನ ಪಕ್ಷದ ಕಾರ್ಯಕರ್ತರಿಗೆ ಅವಕಾಶ ದೊರೆಯಲಿದೆ ಎಂದರು.
ಪಕ್ಷಕ್ಕಾಗಿ ದುಡಿದವರಿಗೆ ಒಂದು ಸ್ಥಾನಮಾನ ಕಲ್ಪಿಸಲು ಇದು ಸದಾವಕಾಶ. ಸರ್ಕಾರ ಕೂಡಲೇ ನಾಮನಿರ್ದೇಶನ ಮಾಡಿ ಮುಗಿಸಬೇಕು ಎಂದು ಮನವಿ ಮಾಡಿದರು.
ಇನ್ನು ಕೆಲವು ಸಮುದಾಯಗಳಿಗೆ ಮಾತ್ರ ನಗರದಲ್ಲಿ ಸಭಾಂಗಣ ನಿರ್ಮಾಣಕ್ಕೆ ನಿವೇಶನ, ಸಭಾಂಗಣ ನಿರ್ಮಾಣ ಆಗಿದೆ. ಸಣ್ಣ ಸಮುದಾಯಗಳಿಗೆ ಆಗಿಲ್ಲ. ಅದಕ್ಕಾಗಿ ಒಂದೇ ಕಡೆ ಸಾಮೂಹಿಕ ವೇದಿಕೆ ಮಾಡಿ, ಅಲ್ಲಿ ಎಲ್ಲಾ ಸಮುದಾಯದ ಜನತೆಗೆ ನಿವೇಶನ ನೀಡಿ ಸಭಾಂಗಣಗಳನ್ನು ನಿರ್ಮಿಸಿ ಕೊಡಿ ಎಂದು ಸಹ ಅವರು ಮನವಿ ಮಾಡಿದ್ದಾರೆ.