ಇತ್ತೀಚಿನ ಸುದ್ದಿ
ರಾಜಕೀಯ ರಣತಂತ್ರಕ್ಕೆ ಮುದುಡಿದ ಕಮಲ: ನಂಜನಗೂಡು ನಗರಸಭೆ ನೂತನ ಸಾರಥಿಗಳಾಗಿ ಕಾಂಗ್ರೆಸ್ ನ ಶ್ರೀಕಂಠ ಸ್ವಾಮಿ ಹಾಗೂ ಜೆಡಿಎಸ್ ನ ರಿಯಾನ ಬಾನು
04/09/2024, 11:09
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದಲ್ಲಿ ಬಹುಮತವಿದ್ದರೂ ಕಾಂಗ್ರೆಸ್ ಮಾರಾಟವಾದ ನಾಲ್ಕು ಮಂದಿ ಬಿಜೆಪಿ ಸದಸ್ಯರಿಂದ ಬಿಜೆಪಿಗೆ ಮುಖಭಂಗವಾಗಿದೆ. ನಂಜನಗೂಡು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಶ್ರೀಕಂಠ ಸ್ವಾಮಿ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ನ ರಿಯಾನ ಬಾನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಬಿಜೆಪಿ 15, ಕಾಂಗ್ರೆಸ್ 10, ಜೆಡಿಎಸ್ 3 ಹಾಗೂ ಪಕ್ಷೇತರರು 3 ಮಂದಿ ಆಯ್ಕೆಯಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶ್ರೀಕಂಠ ಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ರಿಯಾನ ಬಾನು ಹಾಗೂ ಬಿಜೆಪಿ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಪಿ. ದೇವು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಅನಂತ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೀಕಂಠ ಸ್ವಾಮಿಗೆ 16 ಮತಗಳು ಹಾಗೂ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಿಯಾನ ಬಾನು ಅವರಿಗೂ ಕೂಡ 16 ಮತಗಳು ಲಭಿಸಿ ಜಯಶೀಲ ರಾಗಿದ್ದಾರೆ.
ಇನ್ನು ಬಿಜೆಪಿಯಿಂದ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸಿದ್ದ ದೇವು ಅವರಿಗೆ 12 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುಳಾ ಅನಂತು ಅವರಿಗೂ ಕೂಡ 12 ಮತಗಳು ಲಭಿಸಿ ಸೋಲನುಭವಿಸಿದ್ದಾರೆ. ಚುನಾವಣೆಯಲ್ಲಿ ನಾಲ್ಕು ಮಂದಿ ಬಿಜೆಪಿ ಸದಸ್ಯರು ಗೈರು ಹಾಜರಾಗಿ ಒಬ್ಬ ಜೆಡಿಎಸ್ ಸದಸ್ಯ ಯಾರಿಗೂ ಮತ ಚಲಾಯಿಸದೆ ತಟಸ್ಥವಾದ್ದರಿಂದ ಕಾಂಗ್ರೆಸ್ ಗೆಲುವು ಸುಲಭವಾಯಿತು.
ನಗರಸಭೆಯ ಮೊದಲ ಅವಧಿ ಗೆ ಬಿಜೆಪಿ ಸರ್ಕಾರವಿದ್ದು ಆ ಪಕ್ಷದ ಶಾಸಕರು ಮತ್ತು ಸಂಸದರ ಬೆಂಬಲದೊಂದಿಗೆ ಬಿಜೆಪಿ ನಗರಸಭೆ ಆಡಳಿತ ಹಿಡಿದಿತ್ತು. ಈಗ ಕಾಂಗ್ರೆಸ್ ಸರ್ಕಾರವಿದ್ದು ಕಾಂಗ್ರೆಸ್ ನ ಶಾಸಕ ದರ್ಶನ್ ದ್ರುವನಾರಾಯಣ್ ಹಾಗೂ ಸಂಸದ ಸುನಿಲ್ ಬೋಸ್ ಅವರ ಎರಡು ಮತಗಳ ಬೆಂಬಲದೊಂದಿಗೆ ಕಾಂಗ್ರೆಸ್ 12ಕ್ಕೇರಿತ್ತು ಅಲ್ಲದೆ ಪಕ್ಷೇತರರ 3 ಸದಸ್ಯರ ಬೆಂಬಲವೂ ಕೂಡ ಅವರಿಗೆ ಸಿಕ್ಕಿ15 ಆಯಿತು. ಜೆಡಿಎಸ್ ನ ಉಪಾಧ್ಯಕ್ಷ ಸ್ಥಾನ ದ ಮತ್ತೊಂದು ಸದಸ್ಯ ಬೆಂಬಲದೊಂದಿಗೆ 16 ಸ್ಥಾನ ಗಳೊಂದಿಗೆ ಜಯಗಳಿಸುವಲ್ಲಿ ಯಶಸ್ವಿಯಾಯಿತು.
ಬಿಜೆಪಿ 15, ಮೈತ್ರಿ ಪಕ್ಷ ಜೆಡಿಎಸ್ 3 ಸದಸ್ಯರು ಸೇರಿ ಒಟ್ಟು 18 ಸದಸ್ಯರಿದ್ದು ಗೆಲ್ಲುವ ಎಲ್ಲಾ ಅವಕಾಶ ಬಿಜೆಪಿ ಮತ್ತು ಜೆಡಿಎಸ್ ಗೆ ಇತ್ತು. ಆದರೆ ಕಾಂಗ್ರೆಸ್ ನ ನೂತನ ಸಂಸದ ಸುನಿಲ್ ಬೋಸ್ ಹಾಗೂ ಶಾಸಕ ದರ್ಶನ್ ದ್ರುವ ನಾರಾಯಣ್ ಅವರ ರಾಜಕೀಯ ತಂತ್ರಗಾರಿಕೆಯಿಂದ ಬಿಜೆಪಿಯ ನಾಲ್ಕು ಮಂದಿ ಸದಸ್ಯರು ಹಣದ ಆಮಿಷಕ್ಕೆ ಬಲಿಯಾಗಿ ಬಿಜೆಪಿಯಿಂದ ದೂರ ಉಳಿದು ಚುನಾವಣೆಯಲ್ಲಿ ಗೈರು ಹಾಜರಾಗುವ ಮೂಲಕ ಬಿಜೆಪಿಗೆ ದೊಡ್ಡಮಟ್ಟದ ಹೊಡೆತ ನೀಡಿದ್ದಾರೆ.
ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಪಟಾಕಿ ಸಿಡಿಸಿ ಜಯಕಾರದ ಪೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಮತದಾನ ಮುಗಿಸಿ ಬಂದ ಸಂಸದರು, ಶಾಸಕರು ಹಾಗೂ ನೂತನ ಅಧ್ಯಕ್ಷರನ್ನು ಕಾರ್ಯಕರ್ತ ಮುಖಂಡರು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು.
ಚುನಾವಣಾ ಅಧಿಕಾರಿಯಾಗಿ ಮೈಸೂರಿನ ಉಪ ವಿಭಾಗಾಧಿಕಾರಿ ರಕ್ಷಿತ್ ಕಾರ್ಯ ನಿರ್ವಹಿಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿ ವೈ ಎಸ್ ಪಿ ರಘು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿತ್ತು. ಬಳಿಕ ಸಂಸದ ಸುನಿಲ್ ಬೋಸ್, ಶಾಸಕ ದರ್ಶನ್ ಧ್ರುವನಾರಾಯಣ್ ಹಾಗೂ ನೂತನ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮಾತನಾಡಿ ಚುನಾವಣಾ ರಾಜಕೀಯ ರಣತಂತ್ರದ ಬಗ್ಗೆ ವಿವರಿಸಿ ಮುಂದೆ ಎಲ್ಲರ ಸಹಕಾರದಿಂದ ನಂಜನಗೂಡು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.