ಇತ್ತೀಚಿನ ಸುದ್ದಿ
ಎಕ್ಸ್‌ಪರ್ಟ್ ಇ-ಲರ್ನ್ ಆ್ಯಪ್ ಅನಾವರಣ: 3 ಹೊಸ ಆವಿಷ್ಕಾರ ಲೋಕಾರ್ಪಣೆ; ಕೃತಕ ಬುದ್ಧಿಮತ್ತೆ ಆಧಾರಿತ ಕಲಿಕಾ ವಿಧಾನ
24/08/2024, 19:35
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com):ಪ್ರತಿಷ್ಢಿತ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯು ಅಭಿವೃದ್ಧಿಪಡಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಕಲಿಕಾ ವೇದಿಕೆ ಎಕ್ಸ್‌ಪರ್ಟ್ ಇ-ಲರ್ನ್ ಆಪ್ ಅನ್ನು ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಅನಾವರಣಗೊಳಿಸಲಾಯಿತು.
ಐಟಿ ಉದ್ಯಮಿ ಕೆ. ಉಲ್ಲಾಸ್ ಕಾಮತ್ ಅವರು ಆ್ಯಪ್
ಬಿಡುಗಡೆಗೊಳಿಸಿದರು.ಅತಿಥಿಗಳಾಗಿ ಭಾಗವಹಿಸಿದ್ಧ ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಐಟಿ ಉದ್ಯಮಿ ರೋಹಿತ್ ಭಟ್ ಮಾತನಾಡಿ ಶುಭ ಹಾರೈಸಿದರು.
ಎಕ್ಸ್‌ಪರ್ಟ್ ಸಂಸ್ಥೆಯ ಐಟಿ ನಿರ್ದೇಶಕ ಅಂಕುಶ್ ಎನ್. ನಾಯಕ್ ಪ್ರಾಸ್ತವಿಕ ಮಾತುಗಳನ್ನಾಡಿ, ಎಕ್ಸ್‌ಪರ್ಟ್ ಇ-ಲರ್ನ್, ಕೃತಕ ಬುದ್ಧಿಮತ್ತೆ ಆಧಾರಿತ ‘ಇಝಿ’ ಹಾಗೂ ವಿಸ್ತ್ರತ ಅಧ್ಯಯನದ ‘ಎಕ್ಸ್‌ಪೆಡಿಷನ್’ ಎಂಬ ಮೂರು ಹೊಸ ಆವಿಷ್ಕಾರವನ್ನು ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಲೋಕಾರ್ಪಣೆಗೊಳಿಸಿದೆ. ಆಂಡ್ರಾಯ್ಡ್ ಆಧಾರಿತ ಎಕ್ಸ್‌ಪರ್ಟ್ ಇ-ಲರ್ನ್ ಆಪ್‌ನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಹಾಗೂ ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸಸ್‌ನ ವಿದ್ಯಾರ್ಥಿಗಳಿಗೆ ಪೂರೈಸಿದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಮುಕ್ತ ಮಾರುಕಟ್ಟೆಗೆ ಪೂರೈಸಲಾಗುವುದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಲಾಭ ಪಡೆದುಕೊಳ್ಳಬಹುದು. ಎಕ್ಸ್‌ಪರ್ಟ್ ಸಮೂಹ ಸಂಸ್ಥೆಯ ಅನುಭವಿ ಅಧ್ಯಾಪಕರು ಮಾಡಿರುವ ಪಾಠಗಳ ವಿಡಿಯೊವನ್ನು ಎಕ್ಸ್‌ಪರ್ಟ್ ಇ-ಲರ್ನ್‌ನಲ್ಲಿ ನೋಡಬಹುದಾಗಿದೆ ಎಂದು ಹೇಳಿದರು.
ಪ್ರತಿ ವಿಷಯದಲ್ಲಿ ಸುಮಾರು 10 ನಿಮಿಷಗಳ ವಿಡಿಯೋ ಇದ್ದು, ವಿಡಿಯೋ ಪಾಠದ ನಡುವೆ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯು ಪ್ರಶ್ನೆಯನ್ನು ಕೇಳುತ್ತದೆ. ಪ್ರಶ್ನೆಗೆ ಉತ್ತರ ಕೊಟ್ಟರೆ ಮಾತ್ರ ವಿಡಿಯೋ ಮತ್ತೆ ಮುಂದುವರಿಯುತ್ತದೆ. ಇಲ್ಲದಿದ್ದರೆ ಮತ್ತೆ ಮೊದಲಿನಿಂದ ಪ್ಲೇ ಮಾಡಿ ಮನನ ಮಾಡಬೇಕು. ಹೀಗೆ ಒಂದರ್ಥದಲ್ಲಿ ತರಗತಿಯಲ್ಲಿ ಅಧ್ಯಾಪಕರು ಪ್ರಶ್ನೆ ಕೇಳಿದಂತೆ ಇಲ್ಲೂ ಕೇಳಲಾಗುತ್ತದೆ ಎಂದರು.
ಎಕ್ಸ್‌ಪರ್ಟ್‌ನ ಇಝಿ ಎಂಬುದು ಕೃತಕ ಬುದ್ದಿಮತ್ತೆ ಆಧಾರಿತವಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಸಂದೇಹವನ್ನು ಟೈಪ್ ಮಾಡಿ ಕೇಳಿದಾಗ, ವಿಡಿಯೋ, ನೋಟ್ಸ್ ವಿವರಣೆಯನ್ನು ಉದಾಹರಣೆ ಸಹಿತ ವಿವರಿಸಲಾಗುತ್ತದೆ. ಇದು ಎನ್‌ಸಿಆರ್‌ಟಿ ಮತ್ತು ಎಕ್ಸ್‌ಪರ್ಟ್ ಪಬ್ಲಿಷಿಂಗ್ ಹೌಸ್ ಹೊರತಂದಿರುವ ಪುಸ್ತಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ. ಇದು ಇತರ ಸರ್ಚ್ ಎಂಜಿನ್‌ಗಿಂತ ಹೆಚ್ಚು ನಿಖರವಾದ ಉತ್ತರವನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಆಳವಾಗಿ ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಈ ರೀತಿಯ ರಿವಿಷನ್ ಪರಿಣಾಮಕಾರಿಯಾಗಿರುತ್ತದೆ. ಕೃತಕ ಬುದ್ದಿಮತ್ತೆ ಒಂದು ಹೆಜ್ಜೆ ಮುಂದೆ ಹೋಗಿ ವಿದ್ಯಾರ್ಥಿಗಳಿಗೆ ನೋಟ್ಸ್ ಮಾತೃಭಾಷೆಯಲ್ಲೂ ಕೊಡುತ್ತದೆ. ಇದು ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಸಾಮಾನ್ಯವಾಗಿ ಎಲ್ಲ ಆನ್‌ಲೈನ್ ಕ್ಲಾಸ್‌ಗಳು ವನ್ ವೇ ಕಮ್ಯೂನಿಕೇಷನ್‌ನಿಂದ ಕೂಡಿದ್ದರೆ, ಇಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಬಹುದು. ಪಠ್ಯದ ವಿಷಯಗಳ ಕುರಿತು ಎಲ್ಲ ಮಗ್ಗಲುಗಳಿಂದ ಪ್ರಶ್ನೆ ಕೇಳಬಹುದು, ತುಲನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಗಳ ಸಿದ್ದತೆಗಾಗಿ ಮಾದರಿ ಪ್ರಶ್ನೆಗಳನ್ನು ಕೊಡುವಂತೆಯೂ ಕೇಳಬಹುದು. ಮಾದರಿ ಪ್ರಶ್ನೆಗಳಿಗೆ ಉತ್ತರಿಸಿದರೆ ತಕ್ಷಣ ಮೌಲ್ಯಮಾಪನ ಮಾಡಲಾಗುತ್ತದೆ. ಕೀ ಉತ್ತರಗಳನ್ನು ನೀಡುತ್ತದೆ. ಈ ನಡುವೆ ಕಾಲಮಿತಿಯಲ್ಲೂ ಪದವಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಅನ್‌ಲೈನ್‌ನಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ನೀಡುವ ಟ್ಯಾಬ್ ಸುರಕ್ಷಿತವಾಗಿದ್ದು, ಎಕ್ಸ್‌ಪರ್ಟ್‌ನ ಇ-ಲರ್ನ್ ಆಪ್ ಹೊರತುಪಡಿಸಿ ಇತರ ಯಾವುದೇ ಆಪ್ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ಇದನ್ನು ಎಕ್ಸ್‌ಪರ್ಟ್‌ನ ಸರ್ವರ್ ಕೊಠಡಿಯಲ್ಲಿ ಸಂಪೂರ್ಣ ಮಾನಿಟರ್ ಮಾಡಲಾಗುತ್ತದೆ. ಮಕ್ಕಳಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಹಾಗೂ ಆರೋಗ್ಯ ದೃಷ್ಟಿಯಿಂದ ರಾತ್ರಿ ೧೧ರಿಂದ ಮುಂಜಾನೆ ೫ ಗಂಟೆಯವರೆಗೆ ಸ್ಟೀನ್ ಸಂಪೂರ್ಣ ಆಫ್ ಆಗುತ್ತದೆ. ಈ ವೇಳೆ ಕೇವಲ ಅಲಾರ್ಮ್ ಮಾತ್ರ ಕೆಲಸ ಮಾಡುತ್ತದೆ ಎಂದರು.
ಚಿಕ್ಕ ಮಕ್ಕಳಿಗೆ ಇರುವ ಪ್ರಶ್ನಿಸುವ ಮನೋಭಾವ ಹಾಗೂ ಕುತೂಹಲದಿಂದ ನೋಡುವ ಆಸಕ್ತಿಯನ್ನು ನಿರಂತರವಾಗಿಸುವ ಉದ್ದೇಶದಿಂದ ಪಠ್ಯದ ವಿಭಿನ್ನ ರೀತಿಯ ಪ್ರಸ್ತುತತೆಯೇ ಎಕ್ಸ್‌ಪೆಡಿಷನ್. ಫಿಸಿಕ್ಸ್, ಕೆಮೆಸ್ಟ್ರಿ, ಬಯಾಲಜಿ, ಮ್ಯಾತ್ಸ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸ್ಟಾಟಿಸ್ಟಿಕ್ಸ್, ಇಂಗ್ಲಿಷ್, ಕನ್ನಡ, ಸಂಸ್ಕೃತ, ಹಿಂದಿ, ತಮಿಳು, ತೆಲುಗು ವಿಷಯದಲ್ಲೂ ಈ ಪ್ರಯೋಗ ಮಾಡಲಾಗಿದೆ. ಇದು ಪುಸ್ತಕ ರೂಪದಲ್ಲಿ ಎಲ್ಲರಿಗೆ ದೊರೆತರೆ, ಡಿಜಿಟಲ್ ಮಾದರಿಯಲ್ಲಿ ಎಕ್ಸ್‌ಪರ್ಟ್ ಇ-ಲನ್ ಆಪ್‌ನಲ್ಲಿ ದೊರೆಯಲಿದೆ ಎಂದು ತಿಳಿಸಿದರು.
ವಿಷಯದಲ್ಲಿ ಮೇಲಿನ ಆಸಕ್ತಿ ಹೆಚ್ಚಿಸಿ, ವಿಷಯವನ್ನು ಬೇರೆ ಬೇರೆ ಮಗ್ಗುಲುಗಳಿಂದ ವಿಭಿನ್ನ ರೀತಿಯಲ್ಲಿ ಪರಾಮರ್ಶೆ ಮಾಡಲಾಗುತ್ತದೆ. ಯಾವುದೇ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಬೆಳೆಸುವ ಉದ್ದೇಶವೇ ಎಕ್ಸ್‌ಪೆಡಿಷನ್, ಕಲಿಕೆಯಲ್ಲಿ ವಿಷಯಕ್ಕೆ ಹೊಸ ಪ್ರಸ್ತುತತೆಯನ್ನು ಇಲ್ಲಿ ನೀಡಲಾಗಿದೆ. ಸುಲಭವಾಗಿ ಮತ್ತು ಹೆಚ್ಚು ಸೃಜನಾತ್ಮಕ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರೇರಣೆ ನೀಡಲು ಸಿದ್ಧಪಡಿಸಲಾಗಿದೆ ಎಂದು ಅಂಕುಶ್ ತಿಳಿಸಿದರು.
ಅಧ್ಯಕ್ಷತೆಯನ್ನು ಎಕ್ಸಫರ್ಟ್ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ವಹಿಸಿದ್ದರು. ಉಪಾಧ್ಯಕ್ಷೆ ಡಾ. ಉಷಾ ಪ್ರಭಾ ನಾಯಕ್ ಉಪಸ್ಥಿತರಿದ್ದರು.