ಇತ್ತೀಚಿನ ಸುದ್ದಿ
ಬೀದಿಬದಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯ: ತಲಪಾಡಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಾಮೂಹಿಕ ಧರಣಿ
01/08/2024, 18:55
ಮಂಗಳೂರು(reporterkarnataka.com): ತಲಪಾಡಿ ಟೋಲ್ ಗೇಟ್ ಬಳಿಯಲ್ಲಿರುವ ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ವಿನಾಃ ಕಾರಣ ದೌರ್ಜನ್ಯ ನಡೆಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಇಂದು ತಲಪಾಡಿ ಟೋಲ್ ಗೇಟ್ ಬಳಿಯಲ್ಲಿ ಸಾಮೂಹಿಕ ಧರಣಿ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬೀದಿಬದಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.
ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವ್ರದ್ದಿ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ , ಬದುಕಿಗೆ ಯಾವುದೇ ರಕ್ಷಣೆ ಇಲ್ಲದ ಸಂದರ್ಭದಲ್ಲಿ ಧೀರೋದಾತ್ತ ಹೋರಾಟ ನಡೆಸಿದ ಬೀದಿಬದಿ ವ್ಯಾಪಾರಸ್ಥರಿಗೆ ಇಂದು ಕಾನೂನಿನ ರಕ್ಷಣೆ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಅತ್ಯಂತ ಅಮಾನವೀಯವಾಗಿ ವರ್ತಿಸಿರುವುದು ಕಾನೂನು ಬಾಹಿರವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಸಾಕಷ್ಟು ಭೂಮಿಯನ್ನು ಕಬಳಿಸಿರುವ ನುಂಗ್ಗಣ್ಣರವರ ವಿರುದ್ಧ ಎಳ್ಳಷ್ಟೂ ಕ್ರಮ ಕೈಗೊಳ್ಳದ ಪ್ರಾಧಿಕಾರ ಬಡಪಾಯಿ ವ್ಯಾಪಾರಸ್ಥರ ವಿರುದ್ಧ ಪೌರುಷ ತೋರಿಸುವುದು ಎಷ್ಟು ಸರಿ..? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೀದಿಬದಿ ವ್ಯಾಪಾರಸ್ಥರ ಸಂಘದ ತಲಪಾಡಿ ವಲಯ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್, ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಹಾಗೂ ತಮ್ಮ ಬದುಕನ್ನು ತಾವೇ ನಿರ್ಮಿಸುತ್ತಿರುವ ಬೀದಿಬದಿ ವ್ಯಾಪಾರಸ್ಥರನ್ನು ವಿಶೇಷ ಗೌರವ ನೀಡಬೇಕಾದ ಆಳುವ ವರ್ಗ ಇಂದು ಅವರ ವಿರುದ್ಧ ಕೆಂಗಣ್ಣು ಬೀರುತ್ತಿರುವುದು ವಿಪರ್ಯಾಸವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲಿರುವ ಬೀದಿಬದಿ ವ್ಯಾಪಾರಸ್ಥರ ಸಮೀಕ್ಷೆ ನಡೆಸಿ ಕೂಡಲೇ ಅವರಿಗೆ ಗುರುತುಚೀಟಿಯನ್ನು ನೀಡಿ ಸರಕಾರದ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಸಮಾರೋಪ ಭಾಷಣ ಮಾಡಿದ CITU ರಾಜ್ಯ ನಾಯಕರಾದ ಸುಕುಮಾರ್ ತೊಕ್ಕೋಟು ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಾನು ಮಾಡುತ್ತಿರುವ ತಪ್ಪನ್ನು ಮರೆಮಾಚಿ ಅನಾವಶ್ಯಕವಾಗಿ ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ದಾಳಿ ನಡೆಸುತ್ತಿದೆ. ಮಾತ್ರವಲ್ಲದೆ ಅವರ ವಸ್ತುಗಳನ್ನು ಧ್ವಂಸ ಮಾಡಿ ತನ್ನ ರಾಕ್ಷಸೀ ವರ್ತನೆಯನ್ನು ತೋರಿಸಿದೆ ಎಂದು ಹೇಳಿದರು.
ಧರಣಿಯನ್ನುದ್ದೇಶಿಸಿ ರೈತ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುರೇಖಾ ಚಂದ್ರಹಾಸ್, ಕಾರ್ಮಿಕ ಮುಖಂಡರಾದ ಜಯಂತ ನಾಯಕ್, ಯುವಜನ ನಾಯಕರಾದ ರಿಜ್ವಾನ್ ಹರೇಕಳ, ಸ್ಥಳೀಯ ಯುವ ನಾಯಕರಾದ ಯಶು ಕುಮಾರ್ ಪಕ್ಕಳ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿನಯ ನಾಯಕ್ ರವರು ಮಾತನಾಡಿ ಬೀದಿಬದಿ ವ್ಯಾಪಾರಸ್ಥರ ಮೇಲೆ ನಡೆದ ಹೇಯ ಕ್ರತ್ಯವನ್ನು ಖಂಡಿಸಿ, ಬಡಪಾಯಿ ವ್ಯಾಪಾರಸ್ಥರ ಜೊತೆಗೆ ನಾವು ಸದಾ ಕೈಜೋಡಿಸುವುದಾಗಿ ಹೇಳಿದರು.
ಧರಣಿಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಬ್ದುಲ್ ರೆಹಮಾನ್, ನವೀನ್ ಶೆಟ್ಟಿ, ವಿನಾಯಕ ಶೆಣೈ, ವಿಜಯ ಮಹಿಳಾ ನಾಯಕರಾದ ಸುನೀತ ಲೋಬೋ, ಚಂದ್ರಿಕಾ ರೈ,ಮೀನಾ ಟೆಲ್ಲಿಸ್, ಮೀರಾ, ಶೋಭಾ ಕೇಶವ್, ಯೋಗಿತಾ ಉಳ್ಳಾಲ, ಪ್ರಮೀಳಾ ದೇವಾಡಿಗ ಕಾರ್ಮಿಕ ಮುಖಂಡರಾದ ಪ್ರಮೋದಿನಿ ಕಲ್ಲಾಪು, ಇಬ್ರಾಹಿಂ ಮದಕ, ಶಿವಾನಂದ ತಲಪಾಡಿ, ಯುವಜನ ನಾಯಕರಾದ ವರಪ್ರಸಾದ್ ಬಜಾಲ್, ಮನೋಜ್ ಶೆಟ್ಟಿ, ಬಸ್ ನೌಕರರ ಮುಖಂಡರಾದ ಅಲ್ತಾಫ್ ಮುಡಿಪು ಮುಂತಾದವರು ಹಾಜರಿದ್ದರು.