ಇತ್ತೀಚಿನ ಸುದ್ದಿ
ತುಳುವ ಸಂಸ್ಕೃತಿ, ಆಚರಣೆ ಉಳಿಸುವ ಪ್ರಯತ್ನ ನಮ್ಮಿಂದಲೇ ಆಗಬೇಕು: ವಿಜಯಲಕ್ಷ್ಮೀ ಕಟೀಲು
25/07/2024, 18:58
ಬಂಟ್ವಾಳ(reporterkarnataka.com): ಆಟಿ ತಿಂಗಳನ್ನು ಹಿಂದಿನವರು ಹೇಗೆ ಆಚರಿಸುತ್ತಿದ್ದರು, ಆಟಿ ತಿಂಗಳ ವಿವಿಧ ಬಗೆಯ ತಿನಿಸುಗಳು ಆಗಿರಬಹುದು, ಆಟಿ ಅಮವಾಸ್ಯೆಯ ಆಚರಣೆ ಆಗಿರಬಹುದು, ಆಟಿ ಕೆಲೆಂಜನು ಆ ತಿಂಗಳಲ್ಲಿ ಯಾಕೆ ಬರುವನು, ಅದರ ವಿಶೇಷತೆ ಏನು ಎಂಬುದನ್ನು ನಮ್ಮ ಮುಂದಿನ ಮಕ್ಕಳಿಗೆ ತಿಳಿಸಬೇಕು. ತುಳುವ ಸಂಸ್ಕೃತಿ, ಆಚರಣೆ ಉಳಿಸುವ ಪ್ರಯತ್ನ ನಮ್ಮಿಂದಲೇ ಆಗಬೇಕು, ನಮ್ಮ ಹಿರಿಯರು ತುಳುನಾಡಿನ ಪ್ರತಿಯೊಂದು ಆಚರಣೆಗು ಮಹತ್ವವನ್ನು ನೀಡಿ ಅದನ್ನು ಆಚರಿಸುತ್ತಿದ್ದರು ಮತ್ತು ಪ್ರತಿಯೊಂದು ಆಚರಣೆಗು ಅದರದೇ ಆದ ವಿಶೇಷತೆ, ಸಂಸ್ಕೃತಿ, ಸಂಪ್ರದಾಯ ಇತ್ತು ಎಂದು ಮಂಚಿ ಸರಕಾರಿ ಪ್ರೌಢಶಾಲೆ ಶಿಕ್ಷಕಿ ಹಾಗೂ ಸಾಹಿತಿ ವಿಜಯಲಕ್ಷ್ಮೀ ಕಟೀಲು ಹೇಳಿದರು.
ಅವರು ಮಾಣಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಯುವವಾಹಿನಿ(ರಿ.) ಮಾಣಿ ಘಟಕ ಆತಿಥ್ಯದಲ್ಲಿ ನಡೆದ “ಆಟಿದ ನೆಂಪು” ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಸೂರ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿಯಾದ ಕುಶಾಲಪ್ಪ ಪೂಜಾರಿ ಪತ್ತ್ ಕಲಸೆ ಅವರು ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ,ಇನ್ನಷ್ಟು ಇಂತಹ ಕಾರ್ಯಕ್ರಮ ಘಟಕದಿಂದ ಮೂಡಿಬರಲಿ ಎಂದು ಹಾರೈಸಿದರು.
ಘಟಕದ ಗೌರವ ಸಲಹೆಗಾರರಾದ ನಾರಾಯಣ ಸಾಲ್ಯನ್ ಅವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿಕೊಂಡಿರುವ ಘಟಕದ ಅದ್ಯಕ್ಷ ನಾಗೇಶ್ ಪೂಜಾರಿ ಕೊಂಕಣಪದವು ಕಾರ್ಯಕ್ರಮಕ್ಕೆ ತಮ್ಮ ತಮ್ಮ ಮನೆಯಲ್ಲಿ ಆಟಿಯ ತಿಂಗಳ ವಿಶೇಷತೆಯನ್ನು ಬಿಂಬಿಸುವ ವಿವಿಧ ತಿನಿಸುಗಳನ್ನು ತಯಾರಿಸಿ ತಂದ ಘಟಕದ ಸದಸ್ಯರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಚಾಲಕರಾದ ಸತೀಶ್ ಮುರುವ ಹಾಗೂ ಸಹ ಸಂಚಾಲಕರಾದ ಶಶಿಪ್ರಭ ಮಿತ್ತೂರು ಉಪಸ್ಥಿತರಿದ್ದರು.
ಅಸ್ಮಿತಾ ಖೇಲೊ ಇಂಡಿಯಾ ರಾಷ್ಟಿಯ ಮಟ್ಟದ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕ ಪಡೆದುಕೊಂಡ ಬರಿಮಾರು ಗ್ರಾಮದ ರಕ್ಷಾ ಜಿ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಸೆಲ್ಫಿ ವಿದ್ ಚಾವಡಿ ಸ್ಪರ್ಧೆಯಾಲ್ಲಿ ಪ್ರಥಮ ಬಹುಮಾನ ದೀಪಕ್ ಪೆರಾಜೆ ಮತ್ತು ದ್ವಿತೀಯ ಬಹುಮಾನ ಸಾಯಿ ಪ್ರಣಾಮ್ ಹಾಗೂ ಲಕ್ಕಿ ಮೆಂಬರ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಾಲಕೃಷ್ಣ ದೇಲಬೆಟ್ಟು ದ್ವಿತೀಯ ಬಹುಮಾನ ಸತ್ಯಪ್ರಕಶ್ ಪಡೆದುಕೊಂಡರು.
ಕಾರ್ಯಕ್ರಮವನ್ನು ಘಟಕದ ಸದಸ್ಯೆಯೆರಾದ ಪದ್ಮಿನಿ, ನಿಕ್ಷೀತ, ಭವಿಷ್ಯ ಪ್ರಾರ್ಥಿಸಿದರು. ಘಟಕದ ಕಾರ್ಯದರ್ಶಿ ಶಾಲಿನಿ ಜಗದೀಶ್ ಸ್ವಾಗತಿಸಿದರು. ಘಟಕದ ನಿರ್ದೇಶಕರಾದ ನವೀನ್ ಸೂರ್ಯ ವಂದಿಸಿದರು. ಸದಸ್ಯೆರಾದ ಜಯಶ್ರೀ ಹಾಗೂ ಪ್ರಜ್ಞಾ ಎಂ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.