ಇತ್ತೀಚಿನ ಸುದ್ದಿ
ಇಲಾಖೆಗಳ ನಡುವೆ ಸಮನ್ವಯತೆ ಕೊರತೆ: ಮರೋಳಿಯ ಡೇಂಜರ್ ಟ್ರೀ ತೆರವಿಗೆ ಮೀನಮೇಷ!
23/07/2024, 23:28
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಸರಕಾರಿ ಇಲಾಖೆಗಳ ನಡುವೆ ಎಷ್ಟು ಸಮನ್ವಯತೆ ಕೊರತೆ ಇದೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ. ಹಳೆಯ ಮರವೊಂದು ಯಾವುದೇ ಕ್ಷಣದಲ್ಲಿ ಧರಾಶಾಯಿಯಾಗಿ ದಾರಿಹೋಕರಿಗೆ ಅಪಾಯ ಉಂಟು ಮಾಡುವ ಸಾಧ್ಯತೆಗಳಿದ್ದರೂ ಸರಕಾರಿ ಇಲಾಖೆಗಳ ಅಧಿಕಾರಿಗಳು ಲಜ್ಜೆಗೆಟ್ಟು ಬೇರೆಯವರ ಕಡೆ ಬೆರಳು ತೋರಿಸುತ್ತಿದ್ದಾರೆ. ಜನರ ಜೀವದೊಂದಿಗೆ ಆಟವಾಡುತ್ತಿದ್ದಾರೆ.
ಇದು ಮಂಗಳೂರಿನ ಮರೋಳಿ ಸೂರ್ಯ ನಾರಾಯಣ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಹಳೆಯ ಮರದ ಕತೆ. ಪರಿಸರ ಉಳಿವಿಗೆ ಮರಬೇಕು ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಅದೇ ಮರ ಮನುಷ್ಯರಿಗೆ ಅಪಾಯಕಾರಿ ಎಂದಾದರೆ ಅದನ್ನು ತೆರವುಗೊಳಿಸುವುದು ತಪ್ಪಲ್ಲ. ಆದರೆ ಇಲ್ಲಿ ಆಡಳಿತ ನಡೆಸುತ್ತಿರುವ ಮಂಗಳೂರು ಮಹಾನಗರಪಾಲಿಕೆಯಾಗಲಿ, ಮೆಸ್ಕಾಂ ಇಲಾಖೆಯಾಗಲಿ, ಅರಣ್ಯ ಇಲಾಖೆಯಾಗಲಿ ಮರದ ತೆರವಿಗೆ ಮುತುವರ್ಜಿ ವಹಿಸುತ್ತಿಲ್ಲ.
ಮರೋಳಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಈ ಹಳೆಯ ಮರದ ಕೊಂಬೆ ಬೀಳುವ ಸ್ಥಿತಿಯಲ್ಲಿದೆ. ಇದು ಮೆಸ್ಕಾಂ ಹಾಕಿರುವ ಡಮ್ಮಿ ತಂತಿಗೆ ತಾಗಿದ್ದು, ಯಾವುದೇ ಕ್ಷಣದಲ್ಲಿ ಮರ ಬೀಳುವ ಆತಂಕ ಎದುರಾಗಿದೆ.
ವಿಶೇಷವೆಂದರೆ ಮರದ ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದೆ. ಅಂಗನವಾಡಿಗೆ ತೆರಳುವ ಮಕ್ಕಳು ಇದೇ ಮರದಡಿಯಿಂದ ಹಾದು ಹೋಗಬೇಕಾಗಿದೆ. ಸುತ್ತ 50 ಮನೆಗಳಿದ್ದು ಅದೇ ದಾರಿ ದೇವಸ್ಥಾನ ಹಾಗೂ ನಾಗುರಿ ಮತ್ತು ಹೈವೇ ಗೆ ಬಂದು ಸೇರುತ್ತದೆ. ಹೀಗಿರುವಾಗ ಯಾವಾಗ ಮರ ಮೈಮೇಲೆ ಬೀಳುತ್ತೋ ಎನ್ನುವ ಆತಂಕ ಸುತ್ತ ಮುತ್ತ ಜನರದ್ದಾಗಿದೆ. ಈ ಮರ ದಾಟಿ ಶಾಲಾ ಬಸ್ಸುಗಳು ಬರಲು ಒಪ್ಪುತ್ತಿಲ್ಲ. ಮಕ್ಕಳೇ ನಡೆದುಕೊಂಡು ಹೋಗಬೇಕಾಗಿದೆ. ಸ್ಥಳೀಯರು ಸ್ಥಳೀಯ ಕಾರ್ಪೋರೇಟರ್ ಬಳಿ ಅಲವತ್ತು ಕೊಂಡರೂ ಪ್ರಯೋಜನವಾಗಿಲ್ಲ.
ಪಾಲಿಕೆ ವಿದ್ಯುತ್ ವಿಭಾಗದ ಸಂಬಂಧಪಟ್ಟವರು ಬಂದು ನಮಗೆ ಆಗಲ್ಲ ಮೆಸ್ಕಾಂ ತಂತಿ ಇದೆ ಎನ್ನುತ್ತಾರೆ. ಮೆಸ್ಕಾಂಗೆ ಹೇಳಿದರೆ, ಮೆಸ್ಕಾಂ ಸಿಬ್ಬಂದಿಗಳು ಅರಣ್ಯ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗಮನವೇ ಹರಿಸುತ್ತಿಲ್ಲ. ಇನ್ನು ಇದಲ್ಲದೆ ಸುತ್ತಮುತ್ತ ಚಾಲ್ತಿಯಲ್ಲಿರುವ ಮೆಸ್ಕಾಂ ತಂತಿಗೆ ತಾಗಿ ಮರಗಳ ಕೊಂಬೆಗಳಿವೆ. ಯಾರು ಕ್ಯಾರೇ ಎನ್ನುತ್ತಿಲ್ಲ.
ಪಾಂಡೇಶ್ವರದಲ್ಲಿ ಇತ್ತೀಚೆಗೆ ವಿದ್ಯುತ್ ತಂತಿ ತಗುಲಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದರು. ನಂತರ ಸಭೆ ನಡೆಸಿದ ಸ್ಪೀಕರ್ ಯು. ಟಿ. ಖಾದರ್ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸ್ಥಳೀಯರ ದೂರಿಗೆ ಸ್ಪಂದಿಸಬೇಕೆಂದು ತಾಕೀತು ಮಾಡಿದ್ದರು. ಆದರೂ ಯಾವುದೇ ಬದಲಾವಣೆಯಾಗಿಲ್ಲ. ಹಾಗಿರುವಾಗ ಜಿಲ್ಲಾಧಿಕಾರಿಯವರೇ ಇತ್ತ ಗಮನ ಹರಿಸಿಬೇಕು.