ಇತ್ತೀಚಿನ ಸುದ್ದಿ
3 ಘಾಟ್ ಗಳಲ್ಲಿ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಸಮನ್ವಯತೆ ಕೊರತೆ ಬಗ್ಗೆ ಪಿಡಬ್ಲ್ಯೂಡಿ ಪ್ರಧಾನ ಕಾರ್ಯದರ್ಶಿಗೆ ಸ್ಪೀಕರ್ ಖಾದರ್ ಸೂಚನೆ
19/07/2024, 21:59
ಬೆಂಗಳೂರು(reporterkarnataka.com): ಮಂಗಳೂರು-ಬೆಂಗಳೂರು ಸಂಪರ್ಕಿಸುವ ಪ್ರಮುಖ ಮೂರು ಘಾಟ್ ಗಳಾದ ಶಿರಾಡಿ, ಚಾರ್ಮಾಡಿ ಹಾಗೂ ಮಡಿಕೇರಿ ಘಾಟ್ ಗಳನ್ನು ಬಂದ್ ಮಾಡುವುದರಲ್ಲಿ ಸಮನ್ವಯತೆಯ ಕೊರತೆ ಕಂಡುಬರುತ್ತಿದೆ. ಕಳೆದ ರಾತ್ರಿ ಮಡಿಕೇರಿ ಘಾಟ್ ನಲ್ಲಿ ನೂರಾರು ಜನರು ಅತಂತ್ರರಾಗಿದ್ದರು. ಇದು ಉಭಯ ಜಿಲ್ಲೆಗಳ ಜಿಲ್ಲಾಡಳಿತದ ಪೂರ್ವ ಸಿದ್ಧತೆಯ ಕೊರತೆಯಾಗಿದೆ. ಈ ಬಗ್ಗೆ ಇಂದು ಸ್ಪೀಕರ್ ಯು.ಟಿ.ಖಾದರ್ ಲೋಕೋಪಯೋಗಿ ಇಲಾಖೆಯ ಪ್ರದಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅವರಿಗೆ ಸೂಕ್ತ ಸೂಚನೆಯನ್ನು ನೀಡಿದ್ದಾರೆ.
ಮಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿ ಪೂರ್ವಸಿದ್ಧತೆಯೊಂದಿಗೆ ಘಾಟ್ ಬಂದ್ ಬಗ್ಗೆ ಚಿಂತಿಸಬೇಕು. ಒಂದೊಂದು ಜಿಲ್ಲೆ ತೀರ್ಮಾನ ತೆಗೆದುಕೊಂಡರೆ ಜನರಿಗೆ ಸಮಸ್ಯೆಯಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ರಾತ್ರಿ 8ರಿಂದ ಬೆಳಿಗ್ಗೆ 6ರ ತನಕ ರಸ್ತೆ ನಿರ್ಬಂಧ ಮಾಡಬೇಕು. ಲೋಕೋಪಯೋಗಿ ಇಲಾಖೆ ರಸ್ತೆ ಸುರಕ್ಷತೆಗೆ ಪ್ರಾಮುಖ್ಯತೆ ಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೆಲ್ವಕುಮಾರ್ ಅವರಿಗೆ ಯು.ಟಿ.ಖಾದರ್ ಸೂಚಿಸಿದ್ದಾರೆ.
ದಿನನಿತ್ಯ ಸಹಸ್ರಾರು ಮಂದಿ ಮಂಗಳೂರು-ಬೆಂಗಳೂರು ಪ್ರಯಾಣಿಸುತ್ತಾರೆ. ಪ್ರಯಾಣಿಕರು ಬಸ್, ಕಾರುಗಳನ್ನು ಆಶ್ರಯಿಸುತ್ತಾರೆ. ನಿತ್ಯಬಳಕೆಯ ವಸ್ತುಗಳ ಟ್ರಕ್ ಗಳೂ ಸಂಚರಿಸುತ್ತವೆ. ಆದರೆ ಈ ಪ್ರಮುಖ ಮೂರೂ ಘಾಟ್ ರಸ್ತೆಗಳನ್ನು ಬಂದ್ ಮಾಡಿದರೆ ಜನರು ಪರದಾಟ ನಡೆಸಬೇಕಾಗುತ್ತದೆ. ವಿಮಾನ ಸಂಚಾರ ಜನಸಾಮಾನ್ಯರ ಕೈಗೆಟಕದು. ರೈಲು ಸಂಚಾರ ತುರ್ತು ಸಂದರ್ಭಗಳಿಗೆ ಅನುಗುಣವಾಗಿಲ್ಲ. ಈ ನಿಟ್ಟಿನಲ್ಲಿ ರಸ್ತೆ ಸಂಚಾರ ಅನಿವಾರ್ಯವಾಗಿರುತ್ತದೆ. ಮಡಿಕೇರಿ ಘಾಟ್ ನಲ್ಲಿ ನಿನ್ನೆ ಆದಂತಹ ಸಮಸ್ಯೆ ಮರುಕಳಿಸದಂತೆ ವ್ಯವಸ್ಥೆ ಮಾಡಬೇಕಾದುದು ನಾಲ್ಕೂ ಜಿಲ್ಲಾಧಿಕಾರಿಗಳ ಹಾಗೂ ಲೋಕೋಪಯೋಗಿ ಇಲಾಖೆಯ ಕರ್ತವ್ಯವಾಗಿದೆ.