ಇತ್ತೀಚಿನ ಸುದ್ದಿ
ದ.ಕ. ಜಿಲ್ಲೆಯಲ್ಲಿ ಪಿಯುಸಿ ಷರತ್ತು ಬದ್ದ ಆರಂಭ: ಜಿಲ್ಲಾಧಿಕಾರಿ
23/08/2021, 23:00
ಮಂಗಳೂರು(reporterkarnataka.com) ರಾಜ್ಯದ ಹಲವು ಜಿಲ್ಲೆಗಳಲ್ಲಿ 9, 10ನೇ ತರಗತಿಗಳು ಹಾಗೂ ಪಿಯುಸಿ ಪ್ರಾರಂಭಕ್ಕೆ ಸರ್ಕಾರದ ಹಂತದಲ್ಲಿ ಈಗಾಗಲೇ ನಿರ್ಣಯಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಸೂಚ್ಯಂಕ ಹೆಚ್ಚಿರುವ ಕಾರಣ ಕೆಲವು ಷರತ್ತುಗೊಳಪಟ್ಟು ಹಂತ ಹಂತವಾಗಿ ಪಿಯುಸಿ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ವಿದ್ಯಾರ್ಥಿಗಳು ಕಡ್ಡಾಯವಾಗಿ ಆರ್‍ಟಿಪಿಸಿಆರ್ ವರದಿಯನ್ನು ತರಬೇಕು. ಸೋಂಕಿತರು 7 ದಿನ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿರಬೇಕು. ಕ್ವಾಂರಟೈನ್‍ನಿಂದ ಹೊರಬಂದ ನಂತರ ಮತ್ತೊಮ್ಮೆ ಆರ್‍ಟಿಪಿಸಿಆರ್ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗ ಲಕ್ಷಣಗಳು ಕಂಡು ಬಂದರೇ ಸ್ಥಳಿಯ ಆಡಳಿತಕ್ಕೆ ಕೂಡಲೇ ತಿಳಿಸಬೇಕು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಷರತ್ತಿಗೊಳಪಟ್ಟು ಕಾಲೇಜು ಪ್ರಾರಂಭಕ್ಕೆ ಅನುಮತಿ ನೀಡಲಾಗುವುದು. ಇದರ ಫಲಶ್ರುತಿ ಆಧಾರದ ಮೇಲೆ 9 ಹಾಗೂ 10ನೇ ತರಗತಿಗಳ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕೋವಿಡ್‍ನಿಂದ ಸುರಕ್ಷಿತವಾಗಿ ಕಾಲೇಜಿಗೆ ಹಾಜರಾಗುವ ಬಗ್ಗೆ ಸಂಬಂಧಿಸಿದ ಕಾಲೇಜುಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವರದಿಯನ್ನು ಸಿದ್ಧಪಡಿಸಿ, ಅದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಎಸ್.ಒ.ಪಿಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಅವರು ಸೂಚಿಸಿದರು.
ಸಚಿವರಾದ ಅಂಗಾರ ಅವರು ಮಾತನಾಡಿ, ಕೋವಿಡ್ ಸೋಂಕಿನ ಈ ಸಂದರ್ಭದಲ್ಲಿ ಕಾಲೇಜುಗಳ ಕೈಗೊಳ್ಳುವ ನಿಯಮಗಳನ್ನು ಕೂಡಲೇ ತಿಳಿಸಬೇಕು, ಈ ಹಿಂದೆ ಎಸ್.ಎಸ್.ಎಲ್.ಸಿ ಹಾಗೂ ಇತರೆ ಪರೀಕ್ಷೆಗಳನ್ನು ನಡೆಸಿದ ವೇಳೆ ಕೈಗೊಂಡ ಕ್ರಮಗಳನ್ನು ಪಾಲಿಸುವಂತೆ ಅವರು ಸಲಹೆ ನೀಡಿದರು.
ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಸಂಜೀವ ಮಠಂದೂರು, ಪ್ರತಾಪ್ ಚಂದ್ರ ನಾಯಕ್ ಮಾತನಾಡಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಾಣೆ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಕುಮಾರ್ ವೇದಿಕೆಯಲ್ಲಿದ್ದರು.
ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.