ಇತ್ತೀಚಿನ ಸುದ್ದಿ
400 ಹೇಳಿ 300 ತಲುಪದ ಎನ್ ಡಿಎ ಮೈತ್ರಿಕೂಟ: ಹಾಗಾದರೆ ಪ್ರಧಾನಿ ಮೋದಿಗೆ ಉಲ್ಟಾ ಹೊಡೆದ ರಾಜ್ಯಗಳು ಯಾವುದು?
04/06/2024, 23:48

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.ಕಂ
ಈ ಬಾರಿ 400 ಸ್ಥಾನಗಳನ್ನು ಪಡೆಯುವುದಾಗಿ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎನ್ ಡಿಎ ಮೈತ್ರಿಕೂಟವನ್ನು 300 ಗಡಿಗೆ ತಲುಪಿಸಲೂ ಸಾಧ್ಯವಾಗಲಿಲ್ಲ. ಹಾಗೆ ಬಿಜೆಪಿಗೆ ಏಕಾಂಗಿಯಾಗಿ ಮ್ಯಾಜಿಕ್ ಸಂಖ್ಯೆ ಮುಟ್ಟುವುದು ಕೂಡ ಅಸಾಧ್ಯವಾಗಿದೆ. ಪ್ರಮುಖ ರಾಜ್ಯಗಳಲ್ಲೇ ಕೇಸರಿ ಪಾಳಯ ಹಿನ್ನಡೆ ಕಂಡಿರುವುದೇ ಬಿಜೆಪಿಯ ಇಂದಿನ ದುಸ್ಥಿತಿಗೆ ಕಾರಣವಾಗಿದೆ.
ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಏನೇ ಹೇಳಿದರೂ ಕೇಸರಿ ಪಾಳಯಕ್ಕೆ ಈ ಚುನಾವಣೆಯಲ್ಲಿ ದೊಡ್ಡ ಮಟ್ಟಿನ ಹಿನ್ನಡೆಯಾಗಿದೆ.
ಎನ್ ಡಿಎ ಮೈತ್ರಿಕೂಟವೇನೋ ಬಹುಮತ ಪಡೆದರೂ ಮೈತ್ರಿಕೂಟಕ್ಕೆ ನಿರೀಕ್ಷಿತ ಬೆಂಬಲ ದೇಶದ ಮತದಾರರಿಂದ ದೊರಕ್ಕಿಲ್ಲ. ಕಳೆದ ಬಾರಿ 5 ಲಕ್ಷ ಮತಗಳ ಅಂತರದಲ್ಲಿ ಗೆದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಕೇವಲ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಕಾಣಬೇಕಾಯಿತು. ಅದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡು ಹಾಗೂ ರಾಯಬರೇಲಿ ಕ್ಷೇತ್ರಗಳಲ್ಲಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ ಮ್ಯಾಜಿಕ್ ಸಂಖ್ಯೆ ಕೂಡ ತಲುಪಿಲ್ಲ. ಬಿಜೆಪಿಗೆ ಎನ್ ಡಿಎ ಮೈತ್ರಿಕೂಟದ ಮೂಲಕ ಮಾತ್ರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಅಕಸ್ಮಾತ್ ಮೈತ್ರಿಕೂಟದಲ್ಲಿರುವ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷವು ಎನ್ ಡಿಎ ಮೈತ್ರಿಕೂಟವನ್ನು ತೊರೆದು ಇಂಡಿಯಾ ಮೈತ್ರಿಕೂಟ ಸೇರಿಕೊಂಡರೆ ಬಿಜೆಪಿ ಪ್ರತಿಪಕ್ಷದ ಸಾಲಿನಲ್ಲಿ ಕೂರಬೇಕಾಗುತ್ತದೆ.
ಈ ಹಿಂದೆ ವಾಜಪೇಯಿ ನೇತೃತ್ವದ ಎನ್ ಡಿಎ ಸರಕಾರ ಇಂಡಿಯಾ ಶೈನಿಂಗ್ ಎಂದು ಜಾಹೀರಾತು ನೀಡಿ ಅತಿಯಾದ ಆತ್ಮವಿಶ್ವಾಸದಿಂದ ಅವಧಿಗೆ ಮುನ್ನವೇ ಚುನಾವಣೆ ಹೋಗಿ ಸೋಲು ಕಂಡಿದ್ದರು. ಸುಮಾರು 20 ವರ್ಷಗಳ ಬಳಿಕ ಅದೇ ಆತ್ಮವಿಶ್ವಾಸದಲ್ಲಿ ಬೀಗಿದ ಬಿಜೆಪಿ ಅದೇ ರೀತಿಯ ಪರಿಸ್ಥಿತಿ ಎದುರಿಸಬೇಕಾದ ಪ್ರಮೇಯ ಒದಗಿ ಬಂದಿದೆ.
ಬಿಜೆಪಿ ಮಧ್ಯಪ್ರದೇಶ, ಗುಜರಾತ್, ಬಿಹಾರ, ಉತ್ತರಾಖಂಡ, ದಿಲ್ಲಿ, ಅಸ್ಸಾಂನಲ್ಲಿ ಉತ್ತಮ ಸಾಧನೆಯನ್ನು ಮಾಡಿದರೂ ತಾನು ಅತಿಯಾದ ವಿಶ್ವಾಸ ಇಟ್ಟುಕೊಂಡ ರಾಜ್ಯಗಳಲ್ಲಿ ಹಿನ್ನಡೆ ಕಾಣಬೇಕಾಯಿತು. ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳ ರಾಜ್ಯಗಳ ಬಗ್ಗೆ ಬಿಜೆಪಿ ಅತಿಯಾದ ವಿಶ್ವಾಸ ಇಟ್ಟುಕೊಂಡಿತ್ತು. ಆದರೆ ಆ ರಾಜ್ಯಗಳಲ್ಲಿ ರಾಜಕೀಯ ಚಿತ್ರಣವೇ ಬದಲಾಗಿ ಬಿಟ್ಟಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಳ್ವಿಕೆಯ ಉತ್ತರ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಮತದಾನದ ಮೂಲಕ ವ್ಯಕ್ತವಾಗಿದೆ. ಇಲ್ಲಿನ ಅಯೋಧ್ಯೆ ಲೋಕಸಭೆ ಕ್ಷೇತ್ರದಲ್ಲೇ ಬಿಜೆಪಿಗೆ ಗೆಲುವು ಸಾಧ್ಯವಾಗಲಿಲ್ಲ. ಹೆಚ್ಚು ಕಡಿಮೆ ಇಂತಹದ್ದೇ ಫಲಿತಾಂಶವನ್ನು ಬಿಜೆಪಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಕಾಣಬೇಕಾಯಿತು. ಇದೀಗ ಯಾವುದೇ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾದರೂ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಬೆಂಬಲ ಅನಿವಾರ್ಯವಾಗಿದೆ.