ಇತ್ತೀಚಿನ ಸುದ್ದಿ
ಗ್ಯಾರಂಟಿ ಯೋಜನೆಯ ಫಲ ಚುನಾವಣಾ ಫಲಿತಾಂಶದಲ್ಲಿ ಬರಲಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ
02/06/2024, 09:40
ಮಂಗಳೂರು(reporterkarnataka.com): ವಿಧಾನ ಪರಿಷತ್ ಚುನಾವಣೆಯನ್ನೂ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಲಿದೆ. ವಿಧಾನ ಸಭೆ ಮಾದರಿಯಲ್ಲೇ ವಿಧಾನ ಪರಿಷತ್ತಿನಲ್ಲೂ ಪಕ್ಷ ಮೇಲ್ಗೈ ಸಾಧಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯ ಫಲ ಫಲಿತಾಂಶದಲ್ಲಿ ಬರಲಿದೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಕಾರಣ ಕಾಂಗ್ರೆಸ್ ಗೆ ಇದು ಪೂರಕವಾಗಲಿದೆ. ಬೂತಿನಿಂದ ಬ್ಲಾಕ್ ಮಟ್ಟದವರೆಗೆ ಪಕ್ಷವನ್ನು ಸಂಘಟಿಸಲಾಗಿದೆ. ಶಿಕ್ಷಕರ ಬೇಡಿಕೆಯಾದ 7ನೇ ವೇತನ ಆಯೋಗ ಮತ್ತು ಒಪಿಎಸ್ ಜಾರಿ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಕರಣದ ಕುರಿತು ಮಾತನಾಡಿದ ಅವರು, ಪೊಲೀಸರು ಪೂಂಜ ಅವರನ್ನು ಅಂದೇ ಬಂಧಿಸಬೇಕಿತ್ತು. ಕಾನೂನಿಗಿಂತ ಯಾರೂ ದೊಡ್ಡವಲ್ಲ. ಶಾಸಕರು ಸಮಾಜಕ್ಕೆ ಮಾದರಿಯಾಗಿ ಜವಾಬ್ದಾರಿಯಿಂದ ವರ್ತಿಸಬೇಕು. ಅಕ್ರಮ ಕಲ್ಲಕೋರೆ ಪ್ರಕರಣದಲ್ಲಿ ಅವರು ರೌಡಿಶೀಟರ್ ಪರವಹಿಸಿ ಪೊಲೀಸ್ ಅಧಿಕಾರಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಮಂಜುನಾಥ ಭಂಡಾರಿ ಅಸಮಾಧಾನ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಶೋಕ್ ಕೊಡವೂರ್, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಎಂ. ಎಸ್. ಮುಹಮ್ಮದ್, ಇನಾಯತ್ ಅಲಿ, ಲುಕ್ಮನ್ ಬಂಟ್ವಾಳ್, ಅಶ್ವಿನ್ ಕುಮಾರ್ ರೈ ಉಪಸ್ಥಿತರಿದ್ದರು.