ಇತ್ತೀಚಿನ ಸುದ್ದಿ
ಮಂಗಳೂರು ಅಂತಾರಾಷ್ಟ್ರೀಯ ಗುಣ ಮಟ್ಟದ ನಗರವಾಗಿ ಬೆಳೆಯ ಬೇಕು: ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ರೋಹನ್ ಮೊಂತೇರೊ
23/05/2024, 21:43
ಮಂಗಳೂರು(reporterkarnataka.com): ಮಂಗಳೂರು ಅಂತಾರಾಷ್ಟ್ರೀಯ ಗುಣಮಟ್ಟದ ನಗರವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ರೋಹನ್ ಕಾರ್ಪೋರೇಷನ್ ಸ್ಥಾಪಕ ಮತ್ತು ಅಧ್ಯಕ್ಷ ರೋಹನ್ ಮೊಂತೇರೊ ಹೇಳಿದರು.
ಅವರು ಗುರುವಾರ ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಮಂಗಳೂರು ನಗರ ಇನ್ನಷ್ಟು ಬೆಳೆಯಲು ಬೇಕಾದ ನೈಸರ್ಗಿಕ ಸೌಲಭ್ಯವನ್ನು ಹೊಂದಿ ದೆ. ಮಂಗಳೂರು ಜಲ, ವಾಯು, ನೆಲ ಸಾರಿಗೆ ಸಂಪರ್ಕ ಹೊಂದಿರುವ ನಗರ. ಹೆಚ್ಚು ಸುಶಿಕ್ಷಿತ ಜನರು ಇದ್ದಾರೆ. ಜಾತಿ, ಮತದ ದೊಡ್ಡ ಸಮಸ್ಯೆ ಇಲ್ಲ. ಒಂದು ರೀತಿಯಲ್ಲಿ ಮಂಗಳೂರು ಸ್ವರ್ಗದ ರೀತಿಯ ಪ್ರದೇಶ. ಮಂಗಳೂರಿನ ಜನ ದುಬೈ ಗೆ ಹೋಗುತ್ತಾರೆ. ಮಂಗಳೂರನ್ನೇ ದುಬೈ ರೀತಿಯಲ್ಲಿ ಬೆಳೆಸಬೇಕು. ಇಲ್ಲಿನ ಜನರು ಹಲವು ಭಾಷೆ ಗಳಲ್ಲಿ ವ್ಯವಹಾರ ಮಾಡ ಬಲ್ಲವರಾಗಿದ್ದಾರೆ. ನಾನು ಉದ್ಯಮ ಕ್ಷೇತ್ರದಲ್ಲಿ ಬೆಳೆಯಲು ಮಂಗಳೂರಿನ ಜನ ಸಹಕಾರ ನೀಡಿರುವುದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ರೋಹನ್ ಮೊಂತೆರೋ ನುಡಿದರು.
*9ನೇ ತರಗತಿ ಶಾಲೆ ತ್ಯಜಿಸಿದವ ಉದ್ಯಮಿಯಾದ ಬಗೆ*
ತಾನು ಒಂಭತ್ತನೆ ತರಗತಿಯವರೆಗೆ ಶಾಲೆ ಹೋದೆ. ನಂತರ ಔಪಚಾರಿಕ ಶಿಕ್ಷಣ ವ್ಯವಸ್ಥೆ ಯಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯ ವಾಗಲಿಲ್ಲ. ಉಳಾಯಿ ಬೆಟ್ಟು ಎನ್ನುವ ಸಣ್ಣ ಹಳ್ಳಿ ಯಲ್ಲಿ ನಮಗೆ ಸ್ವಲ್ಪ ಜಮೀನು ಇದೆ. ತಂದೆ ಕೃಷಿಕ. ನನ್ನ ನ್ನು ಕೃಷಿ ಕೆಲಸ ಮಾಡಿಕೊಂಡು ಇರಲು ಹೇಳಿದರು. ಆಗ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಹೊಲದಲ್ಲಿ ಊಳ ತೊಡಗಿದೆ. ಸ್ವಲ್ಪ ದಿನದಲ್ಲಿ ನನಗೆ ಕೃಷಿ ಯ ಕಷ್ಟ ನಷ್ಟದ ಅನುಭವ ವಾಯಿತು. ನಾನು ಅದರಲ್ಲಿ ಮುಂದುವರಿ ಯಲು ಇಷ್ಟ ಪಡಲಿಲ್ಲ. ಬಳಿಕ ಒಂದು ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿಯೂ ಸ್ವಲ್ಪ ದಿನದಲ್ಲಿ ಕೆಲಸ ಬಿಟ್ಟು ಒಂದು ಕಡೆ ಆಟೋ ಇಲೆಕ್ಟ್ರೀಶಿಯನ್ ಆಗಿ ಸೇರಿದೆ. ಬಳಿಕ ಏರ್ ಕಂಡೀಶನ್ ನಲ್ಲೂ ಕೆಲಸ ಮಾಡಿದೆ. ಅಲ್ಲೂ ಹೆಚ್ಚು ದಿನ ಇರಲಿಲ್ಲ. ನಂತರ ಒಂದು ಕ್ಯಾಟರಿಂಗ್ ನಲ್ಲಿ ಸೇರಿದೆ. ಬಳಿಕ ಒಂದು ಲಾಂಡ್ರಿ ಮಾಡಿದೆ. ಅದನ್ನು ಆರು ತಿಂಗಳಲ್ಲಿ ಮಾರಾಟ ಮಾಡಿದೆ. ಬಳಿಕ ಒಂದು ಬೇಕರಿ ಅಂಗಡಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಎಂಟು ವರ್ಷ ಕೆಲಸ ಮಾಡಿದೆ. ನಂತರ ಮನೆ ಬಾಡಿಗೆ ವ್ಯವಹಾರ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡು ಇಂದು ಬೃಹತ್ ಬಡಾವಣೆ ನಿರ್ಮಿಸುವ ಹಂತಕ್ಕೆ ತಲುಪಿದೆ. ನಾನು ರಿಯಲ್ ಎಸ್ಟೇಟ್ ನ ಸಣ್ಣ ಪುಟ್ಟ ಕೆಲಸದಲ್ಲಿ ಕಲ್ಲು ಹೊತ್ತು, ಮೇಸ್ತ್ರಿ ಕೆಲಸ ಮಾಡಿದ ಎಲ್ಲಾ ಕಷ್ಟ ನಷ್ಟದ ಅನುಭವ ನನಗೆ ಸಾಕಷ್ಟು ಪಾಠ ಕಲಿಸಿದೆ ಎಂದು ರೋಹನ್ ಮೊಂತೆರೋ ತಮ್ಮ ಅನುಭವವನ್ನು ಹಂಚಿಕೊಂಡರು.
ರೋಹನ್ ಮೊಂತೆರೋ ಕಳೆದ 32 ವರ್ಷಗಳಲ್ಲಿ 40 ರಿಯಲ್ಎಸ್ಟೇಟ್ ಪ್ರೊಜೆಕ್ಟ್ ಗಳನ್ನು ಪೂರ್ಣಗೊಳಿಸಿ 1400 ಜನರಿಗೆ ಉದ್ಯೋಗ ನೀಡಿದ್ದಾರೆ. 3000ಕ್ಕೂ ಅಧಿಕ ಮನೆ ನಿರ್ಮಿಸಿದ್ದಾರೆ. ಮಂಗಳೂರಿನ ಪಡೀಲ್ , ಸುರತ್ಕಲ್ , ಯೆಯ್ಯಾಡಿ, ಸುರತ್ಕಲ್ ನಲ್ಲಿ 8 ಸಾವಿರ ಕೋಟಿ ರೂಪಾಯಿಯ ಯೋಜನೆ ಕೈ ಗೆತ್ತಿಕೊಳ್ಳಲಿರುವುದಾಗಿ ಅವರು ತಿಳಿಸಿದರು.
ಮುಂದಿನ ಹಂತದಲ್ಲಿ ಮೈಸೂರು, ಗೋವಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ವಿಸ್ತರಿಸುವ ಚಿಂತನೆ ಹೊಂದಿರುವುದಾಗಿ ರೋಹನ್ ಮೊಂತೆರೋ ವಿವರಿಸಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಪೋರೆಟ್ ಸಂವಹನಾಧಿಕಾರಿ ಜೈದೀಪ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದ ರು.
ಸಮಾರಂಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಕಾರ್ಯಕ್ರಮ ನಿರ್ದೇಶಕ ವಿಲ್ಫೆಡ್ ಡಿ ಸೋಜ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡಸ್ಥಳ ವಂದಿಸಿದರು.