ಇತ್ತೀಚಿನ ಸುದ್ದಿ
ರೋಟರ‌್ಯಾಕ್ಟ್ ಜಿಲ್ಲಾಮಟ್ಟದ ವಾರ್ಷಿಕ ರಸಪ್ರಶ್ನೆ ಸ್ಪರ್ಧಾಕೂಟ-2024 ; ಚಮನ್ ಎಂ. ಮತ್ತು ಸಾತ್ವಿಕ್ ಯು.ಕೆ ಜೋಡಿ ತಂಡಕ್ಕೆ ಪ್ರಶಸ್ತಿ
14/05/2024, 17:44
ಮಂಗಳೂರು(Reporterkarnataka.com)
ಜಿಲ್ಲಾ ರೋಟರ‌್ಯಾಕ್ಟ್ ಸಂಸ್ಥೆಯ ಆಶ್ರಯದಲ್ಲಿ ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿ. ಶಾಂತರಾಮ ವಾಮಂಜೂರು ಸ್ಮಾರಕ 18ನೇ ವಾರ್ಷಿಕ ಅಂತರ್‌ಕ್ಲಬ್ ಜಿಲ್ಲಾ ಮಟ್ಟದ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟ ಸಂಸ್ಥೆಯ ಸಭಾಪತಿ ಡಾ.ದೇವದಾಸ್ ರೈ ನೇತೃತ್ವದಲ್ಲಿ ಇತ್ತೀಚೆಗೆ ನಗರದ ಕೆನರಾ ಕ್ಲಬ್ ಸಭಾಂಗಣದಲ್ಲಿ ಜರಗಿತು.
ರೋಟರಾಕ್ಟ್ ಕ್ಲಬ್ ಸಂತ ಅಲೋಶಿಯಸ್ ಕಾಲೇಜ್‌ನ್ನು ಪ್ರತಿನಿಧಿಸಿದ ಚಮನ್ ಎಂ. ಮತ್ತು ಸಾತ್ವಿಕ್ ಯು.ಕೆ. ಜೋಡಿ ತಂಡ ಪ್ರಥಮ ಸ್ಥಾನ ಗಳಿಸಿತು.
ರೋಟರಾಕ್ಟ್ ಕ್ಲಬ್ ಪುತ್ತೂರು ಸಂಸ್ಥೆಯನ್ನು ಪ್ರತಿನಿಧಿಸಿದ ಧನುಷಾ ಮತ್ತು ಶ್ರೇಯಸ್ ಜೋಡಿ ತಂಡವು ದ್ವಿತೀಯ ಸ್ಥಾನ ಪಡೆಯಿತು.
ಖ್ಯಾತ ತುಳು ಚಲನಚಿತ್ರ ನಟ ಭೋಜರಾಜ ವಾಮಂಜೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ದಿವಂಗತ ಸಹೋದರ ಶಾಂತಾರಾಮ ವಾಮಂಜೂರು ಸ್ಮರಣಾರ್ಥ ವರ್ಷಂಪ್ರತಿ ಈ ಸ್ಪರ್ದಾಕೂಟವನ್ನು ಆಯೋಜಿಸುವ ಉತ್ತಮ ಸಮಾಜಸೇವಾ ಕಾರ್ಯ ಶ್ಲಾಘನೀಯ ಎಂದು ನುಡಿದು ರೋಟರ‌್ಯಾಕ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ಪ್ರಮಾಣ ಪತ್ರ ಪ್ರದಾನ ಮಾಡಿದರು.
ರೋಟರ‌್ಯಾಕ್ಟ್ ಜಿಲ್ಲಾ ಸಮಿತಿ ಅಧ್ಯಕ್ಷ ಮೂಡಬಿದ್ರೆ ನಗರ ಮೂಲದ ಮಹಮ್ಮದ್ ಅಸ್ಲಾಂ ಗೌರವ ಅತಿಥಿಯಾಗಿ ಪಾಲ್ಗೊಂಡು, ರೋಟರ‌್ಯಾಕ್ಟ್ ಸಂಸ್ಥೆಯ ಯುವ ಸದಸ್ಯರು ಸಂಸ್ಥೆಯ ಧೈಯ, ನೀತಿ, ಮಾಹಿತಿ, ಉದ್ದೇಶಗಳ ಜ್ಞಾನವನ್ನು ವೃದ್ಧಿಸಬೇಕು ಮತ್ತು ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿ ಸ್ಪರ್ಧಾ ವಿಜೇತರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ರೋಟರಾಕ್ಷ ಜಿಲ್ಲಾ ಪ್ರತಿನಿಧಿ ರಾಹುಲ್ ಆಚಾರ್ಯ, ಮಂಗಳೂರು ರೋಟರಿ ಸೆಂಟ್ರಲ್ ಸಂಸ್ಥೆಯ ಚುನಾಯಿತ ಅಧ್ಯಕ್ಷ ಬ್ರಯಾನ್ ಪಿಂಟೋ ಉಪಸ್ಥಿತರಿದ್ದರು.
ರೋಟರ‌್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ 6 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದಿದ್ದವು. ಈ ಸ್ಪರ್ಧಾ ಕೂಟವನ್ನು ರೋಟರ‌್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ ನಿರೂಪಿಸಿದ್ದರು.