ಇತ್ತೀಚಿನ ಸುದ್ದಿ
ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ ನಿರ್ವಹಿಸುವಂತೆ ಎಚ್ಚರಿಕೆ
25/04/2024, 20:11
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಚಾಮರಾಜನಗರ ಲೋಕಸಭಾ ಚುನಾವಣೆಯ ಹಿನ್ನೆಲೆ ನಂಜನಗೂಡು ಮತ್ತು ವರುಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿಗಳು ತೆರಳಲು ಜಿಲ್ಲಾ ಮತ್ತು ತಾಲೂಕು ಆಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ನಂಜನಗೂಡು ಪಟ್ಟಣದ ಜೂನಿಯರ್ ಕಾಲೇಜು ಮತ್ತು ಜೆಎಸ್ಎಸ್ ಕಾಲೇಜಿನ ಮೈದಾನದಲ್ಲಿ ಚುನಾವಣೆ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಚುನಾವಣಾ ಸಲಕರಣೆಗಳನ್ನು ನೀಡಿ ಆಯಾ ಮತಗಟ್ಟೆಗಳಿಗೆ ತೆರಳಲು ಅನುವು ಮಾಡಿಕೊಡಲಾಯಿತು. ನಂಜನಗೂಡಿನ ತಹಶೀಲ್ದಾರ್ ಹಾಗೂ ಚುನಾವಣಾ ಅಧಿಕಾರಿಗಳೂ ಆದ ಶಿವಕುಮಾರ್ ಕಾಸನೂರು ಅವರ ಮಾರ್ಗದರ್ಶನದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ 246 ಮತ್ತು ವರುಣ ವಿಧಾನಸಭೆ ಕ್ಷೇತ್ರದ 261 ಮತಗಟ್ಟೆಗಳಿಗೆ ಎಆರ್‌ಓ, ಎಪಿಆರ್‌ಓ ಮತ್ತು ಮೂವರು ಸಹಾಯಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ವರುಣ ವಿಧಾನಸಭಾ ಕ್ಷೇತ್ರದಲ್ಲಿ 31 ಸೂಕ್ಷ್ಮ ಮತಗಟ್ಟೆಗಳಿವೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 43 ಸೂಕ್ಷ್ಮ ಮತಗಟ್ಟೆಗಳಿದ್ದು ಎಲ್ಲ ಮತಗಟ್ಟೆಗಳಿಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ.
ಕ್ಷೇತ್ರದ ಪ್ರತಿ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನವನ್ನು ನಡೆಸಬೇಕು ಎಂದು ಚುನಾವಣಾ ಸಿಬ್ಬಂದಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಲಾಗಿದೆ.
ಯಾವುದಾದರೂ ಮತಗಟ್ಟೆಯಲ್ಲಿ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಚುನಾವಣಾ ಅಧಿಕಾರಿ ಮತ್ತು ಸೆಕ್ಟರ್ ಅಧಿಕಾರಿಯ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಅಧಿಕಾರಿಗಳಿಂದ ಲೋಪ ದೋಷ ಕಂಡು ಬಂದಲ್ಲಿ ಶಿಸ್ತು ಕ್ರಮಕ್ಕೂ ಮುಂದಾಗ ಬೇಕಾಗುತ್ತದೆ ಜಾಗೃತಿಯಿಂದ ಕೆಲಸ ಮಾಡಿ ನಂಜನಗೂಡು ಮತ್ತು ವರುಣ ಕ್ಷೇತ್ರಗಳಲ್ಲಿ ಹೆಚ್ಚು ಮತದಾನ ನಡೆಯಲು ಸಹಕಾರಿಯಾಗಬೇಕು ಎಂದು ನಂಜನಗೂಡು ಚುನಾವಣಾ ಅಧಿಕಾರಿ ಶಿವಕುಮಾರ್ ಕಾಸನೂರು ಮತ್ತು ಸಹಾಯಕ ಚುನಾವಣೆ ಅಧಿಕಾರಿ ಜಗನ್ನಾಥ ಮೂರ್ತಿ ಮಸ್ಟರಿಂಗ್ ಪ್ರಕ್ರಿಯೆ ಬಗ್ಗೆ ವಿವರಿಸಿದರು
ಇದೇ ಸಂದರ್ಭ ಜಿಲ್ಲಾಧಿಕಾರಿ ಡಾಕ್ಟರ್ ಕೆ ವಿ ರಾಜೇಂದ್ರ ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಎಚ್ಚರಿಕೆ ಹಾಗೂ ಜಾಗೃತೆ ಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ ಎಂದು ಮತಗಟ್ಟೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನಂತರ ಎಲ್ಲಾ ಮತಗಟ್ಟೆ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ಚುನಾವಣಾ ಸಾಮಗ್ರಿಗಳೊಂದಿಗೆ ಬಸ್ ಗಳತ್ತ ದೌಡಾಯಿಸಿದರು.