ಇತ್ತೀಚಿನ ಸುದ್ದಿ
ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ ಪ್ರಚಾರ ಮುಗಿಸಿದ ಕಾಂಗ್ರೆಸ್ !
25/04/2024, 13:20
ಮಂಗಳೂರು(reporterkarnataka.com):ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಪರ ಪ್ರಚಾರ ನಡೆಸಲು ಸ್ಟಾರ್ ಕ್ಯಾಂಪೇನರ್ ಆಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಆದರೆ ಕಾಂಗ್ರೆಸ್ ಪರ ಯಾರೇ ಸ್ಟಾರ್ ಕ್ಯಾಂಪೇನರ್ ಇಲ್ಲದೆ ಪ್ರಚಾರ ಪೂರ್ಣಗೊಂಡಿದೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ನಂತರ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಹಾಗೂ ಮುಲ್ಕಿಯಲ್ಲಿ ಬಹಿರಂಗ ಪ್ರಚಾರ ನಡೆಸಿದ್ದರು. ಚಿತ್ರನಟಿ ಮಾಳವಿಕಾ ಅವರು ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಕಾಂಗ್ರೆಸ್ ಕಡೆಯಿಂದ ಯಾವುದೇ ಸ್ಟಾರ್ ಕ್ಯಾಂಪೇನರ್ ಪ್ರಚಾರ ನಡೆದಿಲ್ಲ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ದಕ್ಷಿಣ ಕನ್ನಡಕ್ಕೆ ಆಗಮಿಸಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ ತೋರಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳೂರಿನತ್ತ ತಲೆ ಹಾಕಿಲ್ಲ. ಫಿಲಂ ಸ್ಟಾರ್ ಗಳು ಬಂದಿಲ್ಲ. ಕೇವಲ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಪೂಜಾರಿ ಅವರು ಕಾಂಗ್ರೆಸ್ ಟೀಮ್ ನೊಂದಿಗೆ ಶ್ರೀಕೃಷ್ಣನ ಸುದರ್ಶನ ಚಕ್ರದ ತರಹ ಕಾಲಿಗೆ ಗಾಲಿ ಕಟ್ಟಿಕೊಂಡು ಇಡೀ ಜಿಲ್ಲೆಯನ್ನು ಸುತ್ತಿ ಮತಯಾಚಿಸಿದ್ದಾರೆ. ಸ್ಟಾರ್ ಕ್ಯಾಂಪೇನರ್ ಬಾರದಿದ್ದರೂ
ಪ್ರಚಾರ ಸಮಿತಿಯ ಅಧ್ಯಕ್ಷ ಬಿ. ರಮಾನಾಥ ರೈ, ಪಕ್ಷದ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ, ನಾಯಕರಾದ ಇನಾಯತ್ ಆಲಿ, ಮಿಥುನ್ ರೈ, ಡಾ. ಇಫ್ತಿಕಾರ್, ಮಮತಾ ಗಟ್ಟಿ
ಯುವ ಮುಖಂಡ ಪ್ರವೀಣ್ ಚಂದ್ರ ಆಳ್ವ ಮುಂತಾದವರು ಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿಕೊಳ್ಳುತ್ತಿದ್ದಾರೆ.