ಇತ್ತೀಚಿನ ಸುದ್ದಿ
ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ
24/04/2024, 23:19
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಹಿರಂಗ ಪ್ರಚಾರದ ಕೊನೆಯ ದಿನ ತಮ್ಮ ಅನುಭವಗಳನ್ನು ಹಾಗೂ ತಮ್ಮ ಕಾರ್ಯಸೂಚಿಯ ವಿವರಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡಸಿದ ಸುದ್ದಿಗೋಷ್ಠಿಯಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟರು.
*ಮುಖ್ಯಾಂಶಗಳು:*
2024ರ ಮಹಾ ಚುನಾವಣೆಯ ಹೊಸ್ತಿಲಲ್ಲಿ ನಾವಿದ್ದೇವೆ. ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳುತ್ತಿದೆ. ಬಿಜೆಪಿಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾ ನಡೆದಿರುವ ರೀತಿಯ ಬಗ್ಗೆ, ಈ ಸಂದರ್ಭದಲ್ಲಿ ನನಗಾದ ಅನುಭವಗಳ ಬಗ್ಗೆ ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೇನೆ. ಭಾರತೀಯ ಸೈನ್ಯದಲ್ಲಿ ಕೆಲಸ ಮಾಡಿದಂತಹ ನನಗೆ ಬಿಜೆಪಿಯ ಯುವ ಕಾರ್ಯಕರ್ತನಾದ ನನಗೆ ಅತ್ಯಂತ ಸೂಕ್ಷ್ಮವಾದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಚುನಾವಣೆ ಘೋಷಣೆಯಾದ ದಿನದಿಂದ ಇವತ್ತಿನ ವರೆಗೆ ಪಕ್ಷದ ಅಧ್ಯಕ್ಷರು ಮತ್ತು ಪ್ರಭಾರಿಗಳ ನೇತೃತ್ವದಲ್ಲಿ ಇಡೀ ಜಿಲ್ಲೆಯಾದ್ಯಂತ ಓಡಾಡಿ ಕಾರ್ಯಕರ್ತರು ಮತ್ತು ಮತದಾರರನ್ನು ತಲುಪುವ ಕೆಲಸ ಮಾಡಿದ್ದೇನೆ. ಚುನಾವಣೆ ಘೋಷಣೆಯಾದ ಕೂಡಲೇ ಮೊದಲು ಹುತಾತ್ಮರ ಸ್ಮಾರಕ್ಕೆ ತೆರಳಿ ನಮನ ಸಲ್ಲಿಸಿ ಈ ಮಣ್ಣಿಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಿ ನನ್ನ ಚುನಾವಣಾ ಪ್ರಚಾರವನ್ನು ಆರಂಭಿಸಿದೆ. ಇವತ್ತು ಈ ತುಳುನಾಡಿನ ಹೆಮ್ಮೆಯ ಮಣ್ಣಿನ ಮಗ, ವೈಯಕ್ತಿಕವಾಗಿ ನನಗೆ ಪ್ರೇರಣೆಯ ಶಕ್ತಿ, ಯುವ ರಾಜಕಾರಣಗಳಿಗೆ ಆದರ್ಶವಾಗಿರುವ, ದೇಶದ ರಕ್ಷಣಾ ಸಚಿವರಾಗಿ ಕೆಲಸ ಮಾಡಿರುವ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸುತ್ತೇನೆ. ಆ ಮೇಲೆ ಶಕ್ತಿನಗರ ರೋಡ್ ಶೋ ಬಳಿಕ ಬಹಿರಂಗ ಪ್ರಚಾರ ಅಂತ್ಯವಾಗುತ್ತದೆ ಎಂದು ಕ್ಯಾ. ಚೌಟ ತಿಳಿಸಿದರು.
ಜಾರ್ಜ್ ಫರ್ನಾಂಡಿಸ್ ಅವರು ತುಳುನಾಡಿನ ಹೆಮ್ಮೆ, ದಕ್ಷಿಣ ಕನ್ನಡದ ಹೆಮ್ಮೆ. ಅವರು ಶಿಕ್ಷಣ ಪಡೆದ ಸಂತ ಅಲೋಶಿಯಸ್ ಕಾಲೇಜಿನಲ್ಲೇ ನಾನೂ ಶಿಕ್ಷಣ ಪಡೆದಿದ್ದೇನೆ. ದ.ಕ. ಜಿಲ್ಲೆಯ ದೃಷ್ಟಿಯಿಂದ ಕೊಂಕಣ ರೈಲ್ವೆಯ ಕೆಲಸವನ್ನು ಕಲ್ಪನೆಯಿಂದ ಅನುಷ್ಠಾನದ ವರೆಗೂ ಪೂರ್ಣವಾಗಿ ನಿರ್ವಹಿಸಿದ ಮಹಾನ್ ವ್ಯಕ್ತಿ ಅವರು. ಅವರನ್ನು ಆದರ್ಶವಾಗಿ ಇಟ್ಟುಕೊಂಡು ಸರಳತೆ, ಸ್ಪಷ್ಟ ವಿಚಾರ, ಅಭಿವೃದ್ಧಿಯ ವಿಚಾರ, ರಾಷ್ಟ್ರೀಯತೆಯಲ್ಲಿ ಅವರನ್ನು ಆದರ್ಶವಾಗಿಟ್ಟುಕೊಂಡು ರಾಜಕಾರಣ ಮಾಡುವೆ. ಮೊದಲಿಗೆ ಎಲ್ಲ ಎಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಹೋಗಿ ನಮ್ಮ ಕಾರ್ಯಕರ್ತರ ಜತೆ ಮಾತನಾಡಿ ಅವರ ಪ್ರೀತಿ ವಿಶ್ವಾಸ, ಸಹಕಾರದ ಮೂಲಕ ಮತದಾರರನ್ನು ತಲುಪುವ ಕೆಲಸ ಮಾಡಿದ್ದೇನೆ ಎಂದರು.
ನಾಮಪತ್ರ ಸಲ್ಲಿಕೆಗೆ ಒಂದು ದಿನ ಮೊದಲು 7-8 ಮೀನುಗಾರ ಮಹಿಳೆಯರು, ಹೂ ಮಾರುವ ಮಹಿಳೆಯರು, ಸಾಮಾನ್ಯರಿಂದ ಅತಿ ಸಾಮಾನ್ಯರಾಗಿರುವ ಮಹಿಳೆಯರು ಬಂದು ಇಡುಗಂಟಿನ ಮೊತ್ತಕ್ಕೆ ತಮ್ಮ ದೇಣಿಗೆಯನ್ನು ಕೊಟ್ಟಿದ್ದರು. ಇದು ನನ್ನ ಹೃದಯಕ್ಕೆ ತಟ್ಟಿದ ಕ್ಷಣ. ಅತ್ಯಂತ ಭಾವನಾತ್ಮಕ ಕ್ಷಣ.
ಪ್ರಧಾನಿ ನರೇಂದ್ರ ಮೋದಿಯವರು ತಾಯಂದಿರ ಮಧ್ಯೆ ತಲುಪಿದ್ದಾರೆ ಎಂಬುದಕ್ಕೆ ನಿದರ್ಶನವಾಗಿ ನನಗೆ ಈ ಘಟನೆ ಕಾಣಿಸಿತು. ಪ್ರಧಾನಿಯವರ ಪ್ರತಿನಿಧಿಯವರಾಗಿರುವ ಕಾರಣಕ್ಕೆ ಈ ತಾಯಂದಿರು ತಾವೂ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಶಯದಿಂದ ಈ ಕೆಲಸ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ತಾಯಂದಿರಿಗೆ ಋಣಿಯಾಗಿರುತ್ತೇನೆ. ಅವರ ಭದ್ರೆತ ವಿಷಯದಲ್ಲಿ, ಅವರ ಗೌರದ ವಿಷಯದಲ್ಲಿ ಸ್ವಾಭಿಮಾನದ ವಿಷಯದಲ್ಲಿ ನಾನು ಅವರ ಮಗನಾಗಿ ಕೆಲಸ ಮಾಡುವೆ ಎಂದು ಕ್ಯಾ. ಚೌಟ ಹೇಳಿದರು.
ಇನ್ನೊಂದು ಮನಮುಟ್ಟುವ ಘಟನೆಯೆಂದರೆ- ಮೊನ್ನೆ ಮಾಜಿ ಸೈನಿಕರನ್ನು ಭೇಟಿ ಮಾಡುವ ಸಂದರ್ಭದಲ್ಲಿ ವಾಯುಪಡೆಯಲ್ಲಿ ಕೆಲಸ ಮಾಡಿರುವ 74 ವರ್ಷದ ಒಬ್ಬ ಮಾಜಿ ಸೈನಿಕರು ತಮ್ಮ ತಿಂಗಳ ಪಿಂಚಣಿಯನ್ನು ನಿಮ್ಮ ಖರ್ಚಿಗೆ ಇಟ್ಟುಕೊಳ್ಳಿ ಎಂದು ಹೇಳಿ ಕೊಟ್ಟರು. ನರೇಂದ್ರ ಮೋದಿಯವರನ್ನು ಒಬ್ಬ ಸೈನಿಕ ವತ್ತು ತನ್ನ ಪರಿವಾರದವರಾಗಿ ಯೋಚನೆ ಮಾಡುತ್ತಾರೆ. ಹೀಗಾಗಿಯೇ, ದಕ್ಷಿಣ ಕನ್ನಡದಲ್ಲಿ ಒಬ್ಬ ಮಾಜಿ ಸೈನಿಕನಿಗೆ ಅವಕಾಶ ಕೊಟ್ಟಿರುವ ಕಾರಣಕ್ಕೆ ಅವರೆಲ್ಲ ಮೋದಿಯವರನ್ನು ತಮ್ಮ ಪರಿವಾರದವರು ಎಂದು ಭಾವಿಸಿದ್ದಾರೆ. ಈ ರೀತಿಯ ಹಲವಾರು ಘಟನೆಗಳು ನಡೆದಿವೆ. ಜಿಲ್ಲೆಯಾದ್ಯಂತ ಪ್ರವಾಸ ಮಾಡುವ ಸಂದರ್ಭದಲ್ಲಿ ಯುವಕರು, ಮಹಿಳೆಯರು, ಬಡವರು, ವಿವಿಧ ರೀತಿಯ ಕಸುಬುದಾರರು ನನ್ನನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಬರಮಾಡಿಕೊಳ್ಳುತ್ತಾ ಬೆಂಬಲ ಸೂಚಿಸಿದ್ದಾರೆ. ಚುನಾವಣೆ ಪ್ರಚಾರ ಆರಂಭಿಸುವ ಸಮಯದಲ್ಲಿ ಹಿಂದುತ್ವಕ್ಕೆ ಬದ್ಧತೆ- ಅಭಿವೃದ್ಧಿಗೆ ಆದ್ಯತೆ ಎಂಬ ನಿಟ್ಟಿನಲ್ಲಿ ಮಾತನಾಡಿದ್ದೆ. ಈ ಮೂಲ ಮಂತ್ರವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ದಕ್ಷಿಣ ಕನ್ನಡದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಧಾನಿಯವರ ವಿಕಸಿತ ಭಾರತದ ಕಲ್ಪನೆಗೆ ಪೂರಕವಾಗಿ ವಿಕಸಿತ ದಕ್ಷಿಣ ಕನ್ನಡವನ್ನು ನಿರ್ಮಾಣ ಮಾಡಬೇಕು, ಎಲ್ಲ ಶಾಸಕರ ಸಹಕಾರ ಬೆಂಬಲವನ್ನು ಪಡೆದುಕೊಂಡು ಈ ಕಾರ್ಯವನ್ನು ಸಾಧಿಸಬೇಕು ಎಂದು ನಾನು ತೀರ್ಮಾನಿಸಿದ್ದೇನೆ. ದೂರದೃಷ್ಟಿಯ ಯೋಜನೆ, ನನಗೆ ನಾನೇ ಹಾಕಿರುವ ಟಾಸ್ಕ್ ಶೀಟ್ ನಿನ್ನೆ ಬಿಡುಗಡೆ ಮಾಡಿದ್ದೇವೆ. ನವಯುಗ- ನವಪಥ ಎಂಬ ಟಾಸ್ಕ್‌ಶೀಟ್ ಅದು. 9 ಆದ್ಯತೆಯ ಕ್ಷೇತ್ರಗಳನ್ನು ಮುಂದಿಟ್ಟು 2047ರ ವೇಳೆಗೆ ವಿಕಸಿತ ಭಾರತವನ್ನು ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಗೆ ಪೂರಕವಾಗಿ ವಿಕಸಿತ ‘ದಕ್ಷಿಣ ಕನ್ನಡ’ವನ್ನು ಸಾಕಾರಗೊಳಿಸಲು ಈ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಚೌಟ ನುಡಿದರು.
ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಪುಗಾಲು; ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ; ಸ್ಟಾರ್ಟ್ ಅಪ್ ಮತ್ತು ಉದ್ಯಮಶೀಲತೆ; ಪ್ರವಾಸೋದ್ಯಮ; ನಾರಿಶಕ್ತಿ; ಸಂಸ್ಕೃತಿ ಹಾಗೂ ಪರಂಪರೆ; ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ; ಯುವಜನತೆ ಮತ್ತು ಸಂವಹನ; ಕರಾವಳಿ ಅಭಿವೃದ್ಧಿ ಮತ್ತು ಭದ್ರತೆ- ಇವೇ ಆ 9 ಆದ್ಯತಾ ಕ್ಷೇತ್ರಗಳು ಎಂದು ಚೌಟ ಹೇಳಿದರು.