ಇತ್ತೀಚಿನ ಸುದ್ದಿ
ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ ಬಿಡಲಾರರು: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಎಚ್ಚರಿಕೆ
22/04/2024, 22:58
ಮಂಗಳೂರು(reporterkarnataka.com): ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರ ಪರಿಹಾರವನ್ನು ಬಿಡುಗಡೆ ಮಾಡದೆ ಮತ ಯಾಚನೆಗಾಗಿ ರಾಜ್ಯಕ್ಕೆ ಆಗಮಿಸಿದರೆ ರಾಜ್ಯದ ರೈತರು ಸೇರಿದಂತೆ ಎಲ್ಲ ವರ್ಗದ ಜನರಿಂದ ಬಹಿಷ್ಕಾರವನ್ನು ಎದುರಿಸಬೇಕಾದೀತು ಎಂದು ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ತಯಾರಿಯ ಪೂರ್ವ ಸಿದ್ಧತೆಯ ಪರಿಶೀಲನೆಗಾಗಿ ಮಂಗಳೂರಿಗೆ ಆಗಮಿಸಿದ ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕ ಸರಕಾರವು ನ್ಯಾಯಯುತವಾಗಿ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿ ಪ್ರತೀಕಾರದ ನಿಲುವನ್ನು ತೋರಿಸುತ್ತಿದೆ ಎಂದರು.
ಬರ ಪರಿಹಾರ ವರದಿಯ ಪ್ರಕಾರ ೧೮,೧೭೨ ಕೋಟಿ ರೂ. ಕರ್ನಾಟಕದ ಜನತೆಗೆ ನೀಡುವುದು ಮೋದಿ ಮತ್ತು ಅಮಿತ್ ಶಾ ಅವರ ಜವಾಬ್ದಾರಿ. ನೀಡಬೇಕಾದ್ದನ್ನು ನೀಡದೆ ಈಗ ರಾಜ್ಯಕ್ಕೆ ಓಟು ಕೇಳಲು ಬರುತ್ತಿದ್ದಾರೆ. ಇಂದು ರಾತ್ರಿಯೊಳಗೆ ಬರ ಪರಿಹಾರ ಅನುದಾನ ಬಿಡುಗಡೆ ಮಾಡಿ, ಇಲ್ಲದಿದ್ದರೆ ಕರ್ನಾಟಕಕ್ಕೆ ಬರಬೇಡಿ ಎಂದರು.
ಕೇಂದ್ರ ಸರಕಾರದಿಂದ ರಾಜ್ಯದ ಮೇಲಿನ ದ್ವೇಷ, ಪ್ರತೀಕಾರದ ರಾಜಕೀಯ ಕೇವಲ ಬರ ಬರಿಹಾರ ನೀಡದಿರುವುದಕ್ಕೆ ಸೀಮಿತವಾಗಿಲ್ಲ. ೧೫ನೆ ಹಣಕಾಸಿನಡಿ ರಾಜ್ಯದ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ೫೮೦೦೦ ಕೋಟಿ ರೂ. ಭದ್ರಾ ಅಣೆಕಟ್ಟಿಗೆ ಕೇಂದ್ರದಿಂದ ೬೦೦೦ ಕೋಟಿ ರೂ., ಹೈದರಾಬಾದ್ ಮಾದರಿಯಲ್ಲಿ ಬೆಂಗಳೂರು ಫೆರಿಫೆರಲ್ ರಸ್ತೆಗೆ ೩೦,೦೦೦ ಕೋಟಿ ರೂ. ಯಾಕೆ ನಿರಾಕರಣೆ ಮಾಡಲಾಯಿತು ಎಂದರು.
ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಜಾಹೀರಾತಿನ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ರಣದೀಪ್ ಸುರ್ಜೇವಾಲಾ, ೧೦ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಚುನಾವಣಾ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ೨ ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರಲ್ಲದೆ, ೨೦೨೨ಕ್ಕೆ ರೈತರ ಆದಾಯ ದ್ವಿಗುಣ ಗೊಳಿಸುವುದಾಗಿ ಹೇಳಿದ್ದರು. ಸ್ಮಾರ್ಟ್ ಸಿಟಿಗಳನ್ನು ಮಾಡುವುದಾಗಿ ಘೋಷಿಸಿದ್ದರು. ಆದರೆ ಬಿಜೆಪಿಯದ್ದು ಕೇವಲ ಚೊಂಬು ಮಾದರಿಯಷ್ಟೇ ಎಂದು ಹೇಳುತ್ತಾ ಪತ್ರಿಕಾಗೋಷ್ಠಿಯಲ್ಲೂ ಚೆಂಬು ಪ್ರದರ್ಶಿಸಿದರು.
೯೦ ದಿನಗಳಲ್ಲಿ ಕರ್ನಾಟದ ಮಗಳು ನೇಹಾಗೆ ನ್ಯಾಯ
ಉತ್ತರ ಕನ್ನಡದ ಪರೇಶ್ ಮೇಸ್ತ ಸಾವಿನ ಸಂದರ್ಭದಲ್ಲಿ ಕೀಳು ರಾಜಕೀಯ ಮಾಡಿದಂತೆಯೇ ಇದೀಗ ಹುಬ್ಬಳ್ಳಿಯ ನೇಹಾ ಕೊಲೆ ವಿಚಾರದಲ್ಲೂ ಬಿಜೆಪಿ ರಾಜಕೀಯ ನಡೆಸುತ್ತಿದೆ. ನೇಹಾ ಕರ್ನಾಟಕದ ಮಗಳು. ಮುಂದಿನ ಮೂರು ತಿಂಗಳೊಳಗೆ ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಕಠಿಣ ಶಿಕ್ಷೆಯಾಗುವಂತೆ ಮಾಡಿ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುತ್ತೇವೆ. ನೇಹಾಗೆ ನ್ಯಾಯ ನೀಡೋದು ಅತ್ಯಂತ ಮುಖ್ಯವೇ ಹೊರತು ಕೀಳು ರಾಜಕೀಯ ಮಾಡೋದಲ್ಲ ಎಂದು ಸುರ್ಜೇವಾಲಾ ಹೇಳಿದರು.
ಪರೇಶ್ ಮೇಸ್ತ ಪ್ರಕರಣದಲ್ಲಿ ಮೋದಿ, ಶಾ ಸೇರಿದಂತೆ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡಿ ರಾಜಕೀಯ ಮಾಡಿದರು. ಬಳಿಕ ಮೇಸ್ತ ಕುಟುಂಬವನ್ನೇ ಕೈಬಿಟ್ಟರು. ತೀರ್ಪು ಬಂದ ಬಳಿಕ ಅಂದು ಮೋದಿ, ಶಾ ಮಾಡಿದ ಆರೋಪಗಳೇ ಸುಳ್ಳು ಎನ್ನುವುದು ಸಾಬೀತಾಗಿಲ್ಲವೇ ಎಂದು ಪ್ರಶ್ನಿಸಿದ ಅವರು, ನೇಹಾ ಪ್ರಕರಣದಲ್ಲೂ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರಾದ
ವಿನಯ ಕುಮಾರ್ ಸೊರಕೆ, ಡಾ. ಮಂಜುನಾಥ ಭಂಡಾರಿ, ಸಲೀಂ ಅಹ್ಮದ್, ಹರೀಶ್ ಕುಮಾರ್, ಇನಾಯತ್ ಅಲಿ, ಜೆ.ಆರ್. ಲೋಬೊ, ಐವನ್ ಡಿಸೋಜಾ, ಸೂರಜ್, ಮಿಥುನ್ ರೈ, ಇಬ್ರಾಹಿಂ, ವಿಜಯ್ ರಕ್ಷಿತ್ ಶಿವರಾಂ, ಸದಾಶಿವ ಉಳ್ಳಾಲ್, ಮಮತಾ ಗಟ್ಟಿ, ಇಬ್ರಾಹಿಂ ಕೋಡಿಜಾಲ್ ಮೊದಲಾದವರು ಉಪಸ್ಥಿತರಿದ್ದರು.