ಇತ್ತೀಚಿನ ಸುದ್ದಿ
ಪಂಜ: ಪದ್ಮರಾಜ್ ಸಮ್ಮುಖದಲ್ಲಿ ಜೆಡಿಎಸ್ ಯುವ ಘಟಕ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಮುಂಡೋಡಿ ಕಾಂಗ್ರೆಸ್ ಸೇರ್ಪಡೆ
11/04/2024, 21:37
ಪಂಜ(reporterkarnataka.com): ದಕ್ಷಿಣ ಕನ್ನಡವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸುವುದೇ ನಮ್ಮ ಧ್ಯೇಯ. ಕೋಮು ದ್ವೇಷದ ಹಣೆ ಪಟ್ಟಿಯನ್ನು ತೆಗೆದು ಹಾಕುವುದು ಇಂದಿನ ಅನಿವಾರ್ಯತೆ ಕೂಡ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಪಂಜದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಳೆದ ಕೆಲ ವರ್ಷಗಳಿಂದ ನಮ್ಮ ಜಿಲ್ಲೆಗೆ ಕೋಮು ದ್ವೇಷದ ಹಣೆಪಟ್ಟಿ ಕಟ್ಟಲಾಗಿದೆ. ಪರಿಣಾಮ ಯಾವುದೇ ಉದ್ದಿಮೆಗಳು ಜಿಲ್ಲೆಗೆ ಬರುತ್ತಿಲ್ಲ. ನಮ್ಮ ಯುವಕ – ಯುವತಿಯರಿಗೆ ಉದ್ಯೋಗ ಸಿಗುತ್ತಿಲ್ಲ. ಹೆತ್ತವರ ಸಂಧ್ಯಾ ಕಾಲದಲ್ಲಿ ಮಕ್ಕಳು ಜೊತೆಗಿರದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಜಿಲ್ಲೆಯನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸಬೇಕಾಗಿರುವುದು ನಮ್ಮ ಧ್ಯೇಯ ಎಂದರು.
ಕಾಂಗ್ರೆಸ್ ಸರಕಾರದ ಸಾಧನೆಗಳು ಹಲವಿವೆ. ಅದರಲ್ಲೂ ಗ್ಯಾರೆಂಟಿ ಯೋಜನೆ ಜನರಿಗೆ ನೇರವಾಗಿ ತಲುಪಿವೆ. ಆದ್ದರಿಂದ ಧೈರ್ಯವಾಗಿ ಜನರ ಬಳಿಗೆ ತೆರಳಿ ಮತ ಕೇಳಿ. ನೀವು ತಲೆ ತಗ್ಗಿಸುವ ಕೆಲಸ ನಾನೆಂದೂ ಮಾಡುವುದಿಲ್ಲ. ಚುನಾವಣೆಯಲ್ಲಿ ಗೆದ್ದು ಬಂದ ಬಳಿಕವೂ ಜನರ ಅಹವಾಲು ಸ್ವೀಕರಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಆಗಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭ ಪ್ರವೀಣ್ ಮುಂಡೋಡಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಇವರು ಜೆಡಿಎಸ್ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾಗಿ, ಸುಳ್ಯ ಜೆಡಿಎಸ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಂ. ಶಹೀದ್, ಧನಂಜಯ ಅಡ್ಪಂಗಾಯ, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ, ಡಾ. ರಘು, ಡಿಸಿಸಿ ಉಪಾಧ್ಯಕ್ಷ ಜಯಪ್ರಕಾಶ್ ರೈ, ಜಿ. ಕೃಷ್ಣಪ್ಪ, ಕಲ್ಮಡ್ಕ ಗ್ರಾಪಂ ಮಹೇಶ್ ಕರಿಕ್ಕಳ, ಇಸಾಖ್ ಸಾಹೇಬ್ ಪಾಜಪ್ಪಳ, ನಿತ್ಯಾನಂದ ಮುಂಡೋಡಿ, ವಿಜಯ್ ಕುಮಾರ್ ಸೊರಕೆ, ಶ್ರೆಯಾಂಶ್ ಕುಮಾರ್ ಶೆಟ್ಟಿಮೂಲೆ, ಜಯರಾಂ ಭಟ್ ಮೊದಲಾದವರು ಉಪಸ್ಥಿತರಿದ್ದರು.