ಇತ್ತೀಚಿನ ಸುದ್ದಿ
ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್: ಸಚಿವ ತಂಗಡಗಿ ಹೇಳಿಕೆಗೆ ಶಾಸಕ ಹರೀಶ್ ಪೂಂಜ ತಿರುಗೇಟು
27/03/2024, 20:07
ಮಂಗಳೂರು(reporterkarnataka.com): ಪ್ರಧಾನಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆ ಹತಾಶೆಯ ಭಾವನೆಯಿಂದ ಕೂಡಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೂ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿರುವುದು ವೇದ್ಯವಾಗುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಲೇವಡಿ ಮಾಡಿದರು.
ಮಂಗಳೂರಿನಲ್ಲಿರುವ ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಸಚಿವ ತಂಗಡಗಿ ಹೇಳಿಕೆಯನ್ನು ಬಿಜೆಪಿ ತೀಕ್ಷ್ಣವಾಗಿ ಖಂಡಿಸುತ್ತದೆ. ಅವರಿಗೆ ತಾಕತ್ತಿದ್ದರೆ ಮೊದಲು ಕಾಂಗ್ರೆಸ್ ಸರಕಾರವನ್ನು ಸರಿದಾರಿಗೆ ತರಲಿ. ಸ್ವತಃ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದೂ ದಲಿತ, ಹಿಂದುಳಿದ ವರ್ಗದವರ ಕುರಿತ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ಧೋರಣೆಯನ್ನು ಸರಿಪಡಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರಕಾರ ತನ್ನ ಗ್ಯಾರಂಟಿ ಭಾಗ್ಯಗಳಿಗೆ ಹಣ ಹೊಂದಿಸಲು ದಲಿತ, ಹಿಂದುಳಿದ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನೂ ದುರ್ಬಳಕೆ ಮಾಡಿಕೊಂಡಿದೆ. ಕಳೆದ ವರ್ಷ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೊಟಿ ರೂ. ಹಾಗೂ ಈ ವರ್ಷ 14 ಸಾವಿರ ಕೋಟಿ ರೂ.ಗಳನ್ನು ಬಿಟ್ಟಿ ಭಾಗ್ಯಗಳಿಗೆ ದುರ್ಬಳಕೆ ಮಾಡಿಕೊಂಡಿದೆ. ಆಮೂಲಕ ಹಿಂದುಳಿದ ವರ್ಗಗಳ ಬಗ್ಗೆ ತನಗೆಷ್ಟು ಕಾಳಜಿ ಇದೆ ಎಂಬುದನ್ನು ತಾನೇ ಬಹಿರಂಗಪಡಿಸಿದೆ ಎಂದು ಶಾಸಕ ಪೂಂಜ ಟೀಕಿಸಿದರು.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಅಂದು ಸೋನಿಯಾ ಗಾಂಧಿ ಮೋದಿಯವರನ್ನು ಸಾವಿನ ವ್ಯಾಪಾರಿ ಎಂದಿದ್ದರು. ಬಳಿಕ ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷ ಸರ್ಪ ಎಂದಿದ್ದರು.
ಸಿದ್ದರಾಮಯ್ಯನವರಂತೂ ಏಕವಚನದಲ್ಲಿ ಮಾತನಾಡುತ್ತಾರೆ. ಅದರ ಮುಂದುವರೆದ ಭಾಗವಾಗಿ ಈಗ ಸಚಿವ ಶಿವರಾಜ್ ತಂಗಡಗಿ ಮೋದಿಯವರಿಗೆ ಬೆಂಬಲಿಸುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ. ಚುನಾವಣಾ ಸೋಲಿನ ವಾಸನೆ ಬರುತ್ತಿದ್ದಂತೆ ಕಾಂಗ್ರೆಸ್ ಮೋದಿಯವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತದೆ, ದೇಶದಲ್ಲಿ ಪಾತಾಳಕ್ಕೆ ತಲುಪಿರುವ ಕಾಂಗ್ರೆಸ್, ರಾಜ್ಯದಲ್ಲೂ ಪಾತಾಳಕ್ಕೆ ಕುಸಿಯುವ ಭಯದಿಂದ ಈ ರೀತಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ಶಾಸಕರು ನುಡಿದರು.
ದೇಶದ ಯುವಕರು ಮೋದಿಯವರ ಆಡಳಿತವನ್ನು ಮೆಚ್ಚಿ ಮೂರನೇ ಬಾರಿಗೆ ಮೋದಿಯವರನ್ನು ಗೆಲ್ಲಿಸುವ ಉತ್ಸಾಹವನ್ನು ಕಾಂಗ್ರೆಸ್ಸಿಗೆ ನೋಡಲಾಗುತ್ತಿಲ್ಲ. ಈ ಹೊಟ್ಟೆಯುರಿಯೇ ಕಾಂಗ್ರೆಸ್ ನಾಯಕರ ದ್ವೇಷದ ಹೇಳಿಕೆಗಳಿಗೆ ಕಾರಣ. ಮೋದಿಯವರ ಆಡಳಿತಾವಧಿಯಲ್ಲಿ ನಿರುದ್ಯೋಗದ ಪ್ರಮಾಣ ಶೇ 4.7% ರಷ್ಟು ಕುಸಿದಿದೆ. ಆರ್ಥಿಕತೆಯಲ್ಲಿ ಭಾರತ 5 ನೇ ಸ್ಥಾನಕ್ಕೇರಿರುವುದರ ಪರಿಣಾಮ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರಕಿವೆ. ಅದಕ್ಕಾಗಿ ಯುವಜನತೆ ಮೋದಿ ಮೋದಿ ಎನ್ನುತ್ತಾರೆ. ಇದನ್ನು ಸಹಿಸದ ಕಾಂಗ್ರೆಸ್ ತೀರ ಕೆಳಮಟ್ಟಕ್ಕೆ ಇಳಿದು ತನ್ನ ನಾಲಿಗೆಯನ್ನು ಹರಿಬಿಟ್ಟಿದೆ ಎಂದು ಹರೀಶ್ ಪೂಂಜ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿಯವರ ಆಡಳಿತದಲ್ಲಿ ಯುವಕರು ತಮ್ಮದೇ ದೇಶದ ನೂರಾರು ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ಸಂಸ್ಥೆಗಳನ್ನು ಶುರು ಮಾಡಿದ್ದಾರೆ, ಅದಕ್ಕಾಗಿಯೇ ಮೋದಿಗೆ ಮತ ನೀಡುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್ಸಿನ 53 ವರ್ಷದ ನಕಲಿ ಗಾಂಧಿ ಕುಟುಂಬದವರನ್ನು ಓಲೈಸುತ್ತ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. 2022-23 ರಲ್ಲಿ 5.20 ಲಕ್ಷ ಯುವಕರು ಪದವಿ ಪಡೆದಿದ್ದಾರೆ. ಆದರೆ ಕಾಂಗ್ರೆಸ್ಸಿನ ಯುವನಿಧಿ ಯೋಜನೆಯಡಿಯಲ್ಲಿ ಕೇವಲ 3500 ಯುವಕರಿಗೆ ಹಣ ಸಿಕ್ಕಿದೆ. ಯುವಕರಿಗೆ ಸುಳ್ಳು ಹೇಳಿ ಮೋಸ ಮಾಡಿದ ಕಾಂಗ್ರೆಸ್ ರಾಜ್ಯದ ಯುವ ಜನತೆಯ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಸುಮಾರು 1.84 ಕೋಟಿ ಮೊದಲ ಬಾರಿಗೆ ಮತಚಲಾಯಿಸುವವರು ಮೋದಿಯವರ ಜೊತೆಗಿದ್ದಾರೆ. 20-29 ವರ್ಷ ವಯಸ್ಸಿನ ಯುವಕರು 19.74 ಕೋಟಿ ಮತದಾರರು , ಮೋದಿಯವರ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ, ಅದಕ್ಕಾಗಿಯೇ ಕಾಂಗ್ರೆಸ್ ಹೆದರುತ್ತಿದೆ. ಮೋದಿಯವರ ಪರ ಘೋಷಣೆ ಕೂಗಿದವರಿಗೆ ಕಪಾಳಮೋಕ್ಷ ಮಾಡುವ ಸಚಿವರ ಕರೆ ಗಾಂಧಿಯವರ ಅಹಿಂಸಾತ್ಮಕ ಆದರ್ಶಗಳಿಗೆ ವಿರುದ್ಧವಾಗಿದೆ. ಇದು ಕಾಂಗ್ರೆಸ್ ಪಕ್ಷದ ನೀತಿಯಲ್ಲಿ ಆತಂಕಕಾರಿ ಬದಲಾವಣೆಯನ್ನು ಸೂಚಿಸುತ್ತದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಇಂತಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸವಾಲೆಸೆಯುವಂತಿದೆ ಎಂದು ಪೂಂಜ ನುಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೊಟ್ಯಾಡಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಯುವಮೋರ್ಚಾ ಉಪಾಧ್ಯಕ್ಷ ಅಶ್ರಿತ್ ನೋಂಡ, ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಪೂಜಾರಿ, ಮಾಧ್ಯಮ ಸಹ ಸಂಚಾಲಕ ಮನೋಹರ್ ಶೆಟ್ಟಿ ಕದ್ರಿ ಉಪಸ್ಥಿತರಿದ್ದರು.