ಇತ್ತೀಚಿನ ಸುದ್ದಿ
ನಂಜನಗೂಡು ದೇಬೂರು ಗ್ರಾಮದಲ್ಲಿ ಕೂಸಿನ ಮನೆ ಶಿಶು ಪಾಲನಾ ಕೇಂದ್ರ ಉದ್ಘಾಟನೆ
10/03/2024, 14:54
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿರುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ದುಡಿಯುವ ಕೈಗಳಿಗೆ ಆಸರೆಯ ಗ್ಯಾರಂಟಿಯಾಗಿರುವ ಕೂಸಿನ ಮನೆ ಶಿಶುಪಾಲನ ಕೇಂದ್ರವನ್ನು ನಂಜನಗೂಡು ತಾಲೂಕು ದೇಬೂರು ಗ್ರಾಮದಲ್ಲಿ ಶಾಸಕ ದರ್ಶನ್ ದ್ರುವ ನಾರಾಯಣ್ ಉದ್ಘಾಟಿಸಿದರು. ಮಕ್ಕಳಿಗೆ ಹಾಲು ನೀಡುವ ಮೂಲಕ ಕೂಸಿನ ಮನೆ ಶಿಶುಪಾಲನ ಕೇಂದ್ರಕ್ಕೆ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ ಇದು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, 6 ತಿಂಗಳಿನಿಂದ 3 ವರ್ಷದ ಒಳಗಿನ ಮಕ್ಕಳ ತಾಯಂದಿರು ನರೇಗಾ ಯೋಜನೆಯಡಿ ದುಡಿಯುವುದಕ್ಕೆ ಹೊರಗಡೆ ಹೋದ ಸಂದರ್ಭ ಅವರ ಮಕ್ಕಳನ್ನು ಈ ಕೇಂದ್ರದಲ್ಲಿ ಎಂಟು ಗಂಟೆಗಳ ಕಾಲದವರೆಗೆ ಜವಾಬ್ದಾರಿಯಿಂದ ಲಾಲನೆ ಪಾಲನೆ ಮಾಡಿ ನಂತರ ಕೆಲಸ ಮುಗಿಸಿ ಬಂದ ತಾಯಂದಿರಿಗೆ ಮಕ್ಕಳನ್ನು ಮತ್ತೆ ವಾಪಸ್ ನೀಡುವ ಯೋಜನೆ ಇದಾಗಿರುತ್ತದೆ. ಈ ಭಾಗದ ಕೂಲಿ ಕಾರ್ಮಿಕ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮಕ್ಕೆ ಬಂದ ಶಾಸಕರಿಗೆ ಗ್ರಾಮದ ಮಹಿಳೆಯರು ಆರತಿ ಮಾಡಿದರೆ ಪುರುಷರು ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಕುರಟ್ಟಿ ಮಹೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಮುಖಂಡರುಗಳಾದ ಸಿದ್ದಲಿಂಗಪ್ಪ, ಪಾಂಡು, ಮಹದೇವಪ್ಪ ಯೋಜನಾ ನಿರ್ದೇಶಕರಾದ ಶಿವಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.