ಇತ್ತೀಚಿನ ಸುದ್ದಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಮಂಗನಕಾಯಿಲೆ ಪ್ರಕರಣ: ಮಹಿಳೆಯಲ್ಲಿ ವೈರಸ್ ಪತ್ತೆ; ಸೋಂಕಿತ ಸಂಖ್ಯೆ 9ಕ್ಕೇರಿಕೆ
08/02/2024, 14:17
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ ಮತ್ತಷ್ಟು ಹೆಚ್ಚುತ್ತಿದ್ದು, ಮಹಿಳೆಯೊಬ್ಬರಲ್ಲಿ ಕೆ.ಎಫ್.ಡಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ಮಂಗನಕಾಯಿಲೆ ಈಡಾದವರ ಸಂಖ್ಯೆ 9ಕ್ಕೇರಿದೆ.
ಜಿಲ್ಲೆಯಲ್ಲಿ ಈಗಾಗಲೇ ಒಬ್ಬರು ಮಂಗನಕಾಯಿಲೆಗೆ ಬಲಿಯಾಗಿದ್ದಾರೆ. ಇದೀಗ 55 ವರ್ಷದ ಮಹಿಳೆಯೊಬ್ಬರಲ್ಲಿ ಕೆ.ಎಫ್.ಡಿ ಪ್ರಕರಣ ಧೃಡಪಟ್ಟಿದೆ.
9 ಮಂದಿಯಲ್ಲಿ ಓರ್ವ ವೃದ್ಧ ಮೃತಪಟ್ಟಿದ್ದಾರೆ. ನಾಲ್ವರು ಗುಣಮುಖರಾಗಿದ್ದಾರೆ. ನಾಲ್ವರು ಕೆ.ಎಫ್.ಡಿ ಪೀಡಿತರಿಗೆ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪರೀಕ್ಷೆಗೊಳಪಟ್ಟಿದ್ದ 7 ಮಂದಿ ಪೈಕಿ ಒಬ್ಬರಲ್ಲಿ ಕೆ.ಎಫ್.ಡಿ ಪತ್ತೆಯಾಗಿತ್ತು.ಕಾಫಿ ಎಸ್ಟೇಟ್ ಭಾಗದಲ್ಲಿ ಕೆ.ಎಫ್.ಡಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಕೊಪ್ಪ ತಾಲೂಕಿನಲ್ಲೇ ಹೆಚ್ಚಾಗಿ ಕಂಡು ಬರುತ್ತಿರುವ ಮಂಗನ ಕಾಯಿಲೆ ಪ್ರಕರಣದಿಂದ ಜನರು ಆತಂಕಕ್ಕೀಡಾಗಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆ.ಎಫ್.ಡಿ ವಾರ್ಡ್ ತೆರೆದಿದೆ.