ಇತ್ತೀಚಿನ ಸುದ್ದಿ
ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಚಾಲನೆ: ವಿವಿಧ ಕಾರ್ಯಕ್ರಮಗಳಿಗೆ ಮಂತ್ರಿ ಮಹೋದಯರಿಂದ ಚಾಲನೆ
07/02/2024, 11:12
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಆರು ದಿನಗಳ ಕಾಲ ನಡೆಯಲಿರುವ ನಂಜನಗೂಡು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಜಾತ್ರಾ ಮಹೋತ್ಸವಕ್ಕೆ ಸುತ್ತೂರು ಶ್ರೀ ಕ್ಷೇತ್ರವು ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಮಧುವಣಗಿತ್ತಿಯಂತೆ ಶೃಂಗಾರಗೊಂಡು ಜಾತ್ರೆಗಾಗಿ ಎಲ್ಲಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೀಯ ಕೇಂದ್ರಗಳಾದ ವಸ್ತುಪ್ರದರ್ಶನ, ಕೃಷಿಮೇಳ, ಆರೋಗ್ಯ ತಪಾಸಣ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಮತ್ತಿತರ ಗಣ್ಯರು ಉಧ್ಘಾಟಿಸಿದರು.
ಸಾಂಸ್ಕೃತಿಕ ಮೇಳವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರೆ ದೋಣಿ ವಿಹಾರಕ್ಕೆ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಚಾಲನೆ ನೀಡಿದರು.
ಉದ್ಘಾಟನೆಗೆ ಬಂದ ಶ್ರೀಗಳು ಹಾಗೂ ಸಚಿವರು ಮತ್ತು ಗಣ್ಯರಿಗೆ ಸುತ್ತೂರಿನ ಶಾಲಾ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಮಂಗಳವಾದ್ಯಗಳೊಂದಿಗೆ ಸ್ವಾಗತಿಸಿದರು. 6 ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾಮೂಹಿಕ ವಿವಾಹ, ರಥೋತ್ಸವ, ಗ್ರಾಮೀಣ ಕ್ರೀಡೆಗಳು ಕೃಷಿ ಮೇಳ, ಭಜನಾ ಮೇಳ , ಸೋಬಾನೆ ಪದ, ಲಕ್ಷ ದೀಪೋತ್ಸವ, ತೆಪ್ಪೋತ್ಸವ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕೃಷಿ ಮೇಳವನ್ನು ಉದ್ಘಾಟಿಸಿದ ಸಚಿವ ದಿನೇಶ್ ಗುಂಡೂರಾವ್ ಶ್ರೀಗಳ ಜೊತೆಗೂಡಿ ಕೃಷಿ ಮೇಳದಲ್ಲಿ ಆಯೋಜಿಸಲಾಗಿದ್ದ ವಿವಿಧ ಬಗೆಯ ಸೊಪ್ಪು ತರಕಾರಿ ಹೂ ಸಿರಿಧಾನ್ಯ ಬೆಳೆಗಳು ಸೇರಿದಂತೆ ಒಂದು ಎಕರೆ ಪ್ರದೇಶದಲ್ಲಿ ಬೆಳೆದ ಬ್ರಹ್ಮಾಂಡ ಕೃಷಿ ಪದ್ಧತಿ ಯನ್ನು ನೋಡಿ ಕಣ್ತುಂಬಿಕೊಂಡು ಅದರ ಬಗ್ಗೆ ವಿವರಗಳನ್ನು ಪಡೆದುಕೊಂಡರು.
ಇದೇ ಸಂದರ್ಭ ವಿವಿಧ ಬಗೆಯ ದೇಶಿ ತಳಿಯ ರಾಸುಗಳನ್ನು ಸಹ ವೀಕ್ಷಿಸಿ ಸಂಭ್ರಮಿಸಿದರು.
ಬಳಿಕ ಸಚಿವದ್ವಯರುಗಳಾದ ದಿನೇಶ್ ಗುಂಡೂರಾವ್ ಮತ್ತು ಮಧು ಬಂಗಾರಪ್ಪ ಮಾತನಾಡಿ ಶ್ರೀ ಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ನಡೆಯಲಿರುವ ಕಾರ್ಯಕ್ರಮ ಕುರಿತು ಹಾಗೂ ಶ್ರೀಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಸ್ತುಪ್ರದರ್ಷನದಲ್ಲಿ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳು ತಿಂಡಿ ತಿನಿಸುಗಳ ವ್ಯಾಪಾರ ವಹಿವಾಟು ಜೋರಾಗಿತ್ತು.
ಇದೇ ಸಂದರ್ಭ ಸಚಿವರುಗಳಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಆರು ದಿನಗಳ ಜಾತ್ರಾ ಮಹೋತ್ಸವಕ್ಕೆ ರಾಜ್ಯವು ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 20 ಲಕ್ಷ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಬರುವ ಎಲ್ಲಾ ಭಕ್ತರಿಗೆ ತ್ರಿಕಾಲ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.