1:38 PM Sunday24 - November 2024
ಬ್ರೇಕಿಂಗ್ ನ್ಯೂಸ್
ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ…

ಇತ್ತೀಚಿನ ಸುದ್ದಿ

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಂಘ ಪ್ರಶಸ್ತಿ

02/02/2024, 00:15

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ ರಾಜ್ಯಮಟ್ಟದ ಅತ್ಯುತ್ತಮ ಜಿಲ್ಲಾ ಸಂಘದ ಪ್ರಶಸ್ತಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಭಾಜನವಾಗಿದೆ.
ಬೆಂಗಳೂರಿನಲ್ಲಿ ಫೆ, 1ರ ಗುರುವಾರ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆ ಸಮಿತಿಯ ಸಭೆಯಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವನ್ನು ಅತ್ಯುತ್ತಮ ಸಂಘ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಕಟಸಿದ್ದಾರೆ.
ದಾವಣಗೆರೆಯಲ್ಲಿ ಫೆ, 3 ಮತ್ತು 4 ರಂದು ನಡೆಯುವ ಕೆ.ಯು.ಡಬ್ಲ್ಯೂಜೆ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಕೋಲಾರ ಜಿಲ್ಲಾ ಸಂಘಕ್ಕೆ ರಾಜ್ಯಮಟ್ಟದ ಪ್ರಶಸ್ತಿ ದೊರಕಿಸಿಕೊಟ್ಟಿರುವುದಕ್ಕಾಗಿ ಕೆ.ಯು.ಡಬ್ಲ್ಯೂಜೆಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮತ್ತು ವಿ.ಮುನಿರಾಜು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕಳೆದ 25 ವರ್ಷಗಳಿಂದ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.
ಸಂಘವು ಕೋಲಾರ ಜಿಲ್ಲೆಯ 6 ತಾಲೂಕುಗಳ 250 ಸದಸ್ಯರನ್ನು ಹೊಂದಿದೆ. ರಾಜ್ಯದ ಹಾಗೂ ಜಿಲ್ಲೆಯ ಎಲ್ಲಾ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಎಲ್ಲಾ ವರದಿಗಾರರು ಸಂಘದ ಸದಸ್ಯರಾಗಿ ಕ್ರಿಯಾಶೀಲರಾಗಿ ಕಾರ್ಯನಿರತರಾಗಿದ್ದಾರೆ.
ಸಂಘದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಒಡಕುಗಳಿಗೆ ಅವಕಾಶವಿಲ್ಲದಂತೆ ಕಾಲಕಾಲಕ್ಕೆ ಪತ್ರಕರ್ತರ ಸಭೆ, ಚರ್ಚೆ, ಸಂವಾದಗಳ ಮೂಲಕ ಒಗ್ಗಟ್ಟು ಮತ್ತು ಶಿಸ್ತನ್ನು ಕಾಪಾಡಿಕೊಂಡು ಬರಲಾಗುತ್ತಿದೆ.
ಕೋಲಾರ ನಗರದ ಪ್ರತಿಷ್ಠಿತ ವಾಣಿಜ್ಯ ಪ್ರದೇಶವಾದ ಕೆ.ಎಸ್. ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದಲ್ಲೇ ಪ್ರವಾಸಿ ತಾಣವಾದ ಅಂತರಗಂಗೆ ರಸ್ತೆಯಲ್ಲಿ 110 *90 ವಿಸ್ತೀರ್ಣದ 10350 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಂತ ಭವ್ಯವಾದ ಪತ್ರಕರ್ತರ ಭವನದ ಕಟ್ಟಡವನ್ನು ನಿರ್ಮಿಸಲಾಗಿದೆ.
2004ರಲ್ಲಿ ಜನವರಿ 26ರಂದು ಭವನದ ಉದ್ಘಾಟನೆ ನೆರವೇರಿಸಲಾಗಿದೆ. ಅತ್ಯಂತ ಸುಸಜ್ಜಿತಗೊಳಿಸುವ ರೀತಿಯಲ್ಲಿ ಭವನವನ್ನು ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ಎರಡು ವರ್ಷದ ಹಿಂದೆ ನವೀಕರಿಸಲಾಗಿದೆ.
ಪತ್ರಕರ್ತರ ಸಂಘವು ತನ್ನ ಕಾರ್ಯಚಟುವಟಿಕೆ ಮತ್ತು ನಿರ್ವಹಣೆಗೆ ಯಾರ ಬಳಿಯೂ ಕೈ ಒಡ್ಡದ ಪರಿಸ್ಥಿತಿ ಬಾರದಂತೆ ಸ್ವಂತ ಸಂಪನ್ಮೂಲ ಕ್ರೂಢೀಕರಣಕ್ಕಾಗಿ 5 ವಾಣಿಜ್ಯ ಮಳಿಗೆಗಳ ಸಂಕಿರಣ ಮತ್ತು ಮೊದಲ ಮಹಡಿಯಲ್ಲಿ ವಿಶಾಲವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಪತ್ರಿಕಾಗೋಷ್ಟಿ ಹಾಗೂ ಸಣ್ಣ ಸಮಾರಂಭಗಳನ್ನು ನಡೆಸುವ ಸಲುವಾಗಿ 100 ಆಸನಗಳ ವ್ಯವಸ್ಥೆ ಇರುವ ಹವಾ ನಿಯಂತ್ರಿತ ಕೊಠಡಿ ಸಜ್ಜುಗೊಳಿಸಲಾಗಿದೆ.
ಸಮಾರಂಭಗಳನ್ನು ನಡೆಸಲು ಅನಕೂಲವಾಗುವಂತೆ 400 ಆಸನಗಳ ವ್ಯವಸ್ಥೆಯ ವಿಶಾಲವಾದ ಸಭಾಂಗಣ ಹೊಂದಲಾಗಿದೆ.
ಮೊದಲ ಮಹಡಿಯಲ್ಲಿ ಸಂಘದ ಕಚೇರಿ, ಮೀಟಿಂಗ್ ಹಾಲ್, ಮತ್ತು ವಾಚಾನಾಲಯಗಳ ವ್ಯವಸ್ಥೆ ಮಾಡಲಾಗಿದೆ.
ಇವೆಲ್ಲದರ ಮೂಲಕ ಪ್ರತಿ ತಿಂಗಳು ಸುಮಾರು ಮಾಸಿಕ 60 ರಿಂದ 70 ಸಾವಿರ ರೂಗಳ ಆದಾಯ ಸಂಗ್ರಹವಾಗುತ್ತಿದೆ. ಈ ಆದಾಯದ ಮೂಲಕವೇ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಸಂಘದ ಆರ್ಥಿಕ ಸ್ವಾವಲಂಬನೆ ಮತ್ತು ಸ್ವಾಭಿಮಾನವನ್ನು ಸಾಧಿಸಲಾಗುತ್ತಿದೆ.
ಸಂಘದ ವಾರ್ಷಿಕ ಚಟುವಟಿಕೆಗಳು
1) ಪತ್ರಿ ವರ್ಷ ಜುಲೈ 1ರಂದೇ ಪತ್ರಿಕಾ ದಿನಾಚರಣೆಯನ್ನು ವೃತ್ತಿಪರವಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಮ್ರಮಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ನೀಡದೆ ಹಿರಿಯ ಪತ್ರಕರ್ತರನ್ನು ಕರೆಸಿ ಅವರಿಂದ ವೃತ್ತಿ ಸಂಬಂಧಿತ ಉಪನ್ಯಾಸ ಏರ್ಪಡಿಸಲಾಗುತ್ತಿದೆ.
2) ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಯ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಪತ್ರಿಕಾ ದಿನಾಚರಣೆ ದಿನ ನಡೆಸಲಾಗುತ್ತದೆ. ಎಸ್.ಎಸ್.ಎಲ್.ಸಿ ಮೇಲ್ಪಟ್ಟು ಯಾವುದೇ ಉನ್ನತ ಕೋರ್ಸ್ ಗಳಲ್ಲಿ ಶೇ. 60 ರಿಂದ ಶೇ. 100 ರವರೆಗೆ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಮೂರು ಹಂತಗಳನ್ನು ವಿಂಗಡಿಸಿ 2000, 3000, 5000 ರೂ ನಗದು ಪುರಸ್ಕಾರ ನೀಡಲಾಗುತ್ತದೆ.
ಈ ಪುರಸ್ಕಾರ ಮೊತ್ತ ಪ್ರತಿವರ್ಷ 2 ರಿಂದ 3 ಲಕ್ಷ ರೂಗಳಾಗುತ್ತದೆ.
3) ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತರ ಸ್ಮರಣಾರ್ಥ 9 ಮಂದಿ ಪ್ರತಿಭಾವಂತ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗುತ್ತದೆ.
೪) ಪತ್ರಕರ್ತರು ಅನಾರೋಗ್ಯಕ್ಕೆ ತುತ್ತಾದಾಗ ಕನಿಷ್ಟ 5000 ರಿಂದ ಗರಿಷ್ಟ 10000 ರೂಗಳ ನಗದು ನೆರವು ನೀಡಲಾಗುತ್ತದೆ.
5) ಪತ್ರಕರ್ತರ ಕುಟುಂಬದಲ್ಲಿ ಯಾರಾದರೂ ನಿಧನರಾದರೆ ಮೃತರ ಅಂತ್ಯ ಸಂಸ್ಕಾರಕ್ಕೆ 5000 ರೂ ನೀಡಲಾಗುತ್ತದೆ.
6) ಪತ್ರಕರ್ತರು ಆಕಸ್ಮಿಕಕ್ಕೆ ಈಡಾಗಿ ಸಾವನ್ನಪ್ಪಿದರೆ ತಕ್ಷಣದ ಪರಿಹಾರ 20000 ರೂ ನೀಡಲಾಗುತ್ತದೆ.
7) ಪತ್ರಕರ್ತರಿಗೆ ಅವರ ಕುಟುಂಬದವರಿಗೆ ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತದೆ.
8) ಪತ್ರಕರ್ತರು ಸುದ್ಧಿಗಳ ರವಾನೆಗೆ ಅನಕೂಲವಾಗುವಂತೆ ಭವನದಲ್ಲಿ ವೈ.ಫೈ ಸೌಲಭ್ಯ ಒದಗಿಸಲಾಗಿದೆ. ಸುದ್ಧಿ ಸಂಗ್ರಹಕ್ಕಾಗಿ ಟಿ.ವಿ.ಸೌಲಭ್ಯ ಒದಗಿಸಲಾಗಿದೆ.
9) ಸಂಘದ ಉಳಿತಾಯದ ಹಣ ಮತ್ತು ಪತ್ರಕರ್ತರಿಂದ ಕೊಂಚ ಪ್ರಮಾಣದ ವಂತಿಗೆ ಕ್ರೋಢೀಕರಿಸಿ ವಾರ್ಷಿಕ ಪ್ರವಾಸ ಕಾರ್ಯಕ್ರಮವನ್ನು ಪತ್ರಕರ್ತರಿಗೋಸ್ಕರ ಆಯೋಜಿಸಲಾಗುತ್ತಿದೆ. ಇದರಲ್ಲಿ ಗರಿಷ್ಟ ಮೊತ್ತ ಸಂಘದ ಪಾಲು ಆಗಿರುತ್ತದೆ.
10) ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಸಭೆ ಸಮಾರಂಭಗಳ ಸುದ್ಧಿಗಳನ್ನು ಪತ್ರಕರ್ತರ ಭವನದ ಮೂಲಕವೇ ಕಳುಹಿಸಬಹುದಾದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸಂಘದ ಕಾರ್ಯಾಲಯದಲ್ಲಿ ಓರ್ವ ಮ್ಯಾನೇಜರ್ ಮತ್ತು ಸಹಾಯಕರನ್ನು ನೇಮಕ ಮಾಡಲಾಗಿದೆ.
ಸಂಘದ ಆರ್ಥಿಕ ಚಟುವಟಿಕೆಗಳ
ಸಂಘದಲ್ಲಿ ಶಿಸ್ತು ರೂಢಿಸುವ ಸಲುವಾಗಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬ್ಯಾಲೆನ್ಸ್ ಶೀಟ್ ಮತ್ತು ವಾರ್ಷಿಕ ಮಹಾಸಭೆಯಲ್ಲಿ ಆಡಿಟ್ ವರದಿಯನ್ನು ಸಲ್ಲಿಸಲಾಗುತ್ತದೆ.
ಸಂಘದ ಭದ್ರತೆಗಾಗಿ ಸಿ.ಸಿ.ಟಿವಿ ಅಳವಡಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಸದಸ್ಯರ ಹಿತರಕ್ಷಣೆಗಾಗಿ ಸಂಘವು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತದೆ.
ಸಂಘದಲ್ಲಿ ಪ್ರತಿವರ್ಷ ಮೇ 1ರಂದು ಕಾರ್ಮಿಕ ದಿನಾಚರಣೆ, ಮಾರ್ಚ್ 17 ರಂದು ಸಂಘದ ಸಂಸ್ಥಾಪಕ
ಡಿವಿಜಿ ಅವರ ಜಯಂತಿ, ಡಿಸೆಂಬರ್ 29 ರಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದ ಹಿರಿಯ ಪತ್ರಕರ್ತ ದಿವಂಗತ ಎಂ.ಎಸ್.ಪ್ರಭಾಕರ(ಕಾಮರೂಪಿ) ಅವರ ಪುಣ್ಯಸ್ಮರಣೆ ನಡಸಲಾಗುತ್ತಿರುತ್ತದೆ.
ಕ್ಷೇಮಾಭಿವೃದ್ಧಿ ನಿಧಿ: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಯಾವುದೇ ಸಂದರ್ಭದಲ್ಲಿ ಪತ್ರಕರ್ತರ ಆಪತ್ಕಾಲಕ್ಕೆ ನೆರವಾಗುವ ಸಲುವಾಗಿ 1 ಕೋಟಿ ರೂಗಳ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯನ್ನು ಸಂಗ್ರಹಿಸಿ ಬ್ಯಾಂಕಿನಲ್ಲಿ ಠೇವಣಿ ಇರಿಸುವ ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿ ಇದುವರೆಗೂ 3,31,055 ರೂ ಸಂಗ್ರಹವಾಗಿದ್ದು, ಕೋಲಾರ ಡಿ.ಸಿ.ಸಿ ಬ್ಯಾಂಕಿನಲ್ಲಿ ಠೇವಣಿ ಇರಿಸಲಾಗಿದೆ.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹಾಗೂ ಮೂಲತ: ಕೋಲಾರದವರೇ ಆದ ಶ್ರೀ.ಕೆ.ವಿ.ಪ್ರಭಾಕರ ಅವರು ಕಲ್ಯಾಣನಿಧಿಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ 25 ಲಕ್ಷ ರೂ ನೆರವನ್ನು ಮಂಜೂರು ಮಾಡಿಸಿದ್ದಾರೆ. ಈ ಹಣದ ಬಿಡುಗಡೆಗಾಗಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಮುಂದಿನ 5 ವರ್ಷಗಳಲ್ಲಿ 1 ಕೋಟಿ ರೂ ನಿಧಿ ಸಂಗ್ರಹಣೆ ಪೂರ್ಣಗೊಳಿಸಲು ಉದ್ಧೇಶಿಸಲಾಗಿದೆ. ಈ ಠೇವಣಿಯಿಂದ ಬರುವ ಬಡ್ಡಿಯಲ್ಲಿ ಪತ್ರಕರ್ತರ ಆಪತ್ಕಾಲದ ಸಂದರ್ಭದಲ್ಲಿ ಆಪದ್ಧನ ಬಳಸಲು ಉದ್ದೇಶಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು