ಇತ್ತೀಚಿನ ಸುದ್ದಿ
ಚಳ್ಳಕೆರೆ: ಕಾಡುಗೊಲ್ಲರ ಕ್ಯಾತೇದೇವರ ಮುಳ್ಳಿನ ಜಾತ್ರೆ; ಕೆಲವೇ ನಿಮಿಷಗಳಲ್ಲಿ ಕಳಸ ಕಿತ್ತ ವೀರಗಾರರು
29/01/2024, 19:44
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಇಂದಿನ ತಂತ್ರಜ್ಞಾನ ಯುಗದಲ್ಲಿ ಕಾಲ ಬದಲಾದಂತೆ ಸಾಂಪ್ರದಾಯಿಕ ಆಚರಣೆಗಳು ಕೂಡ ತೆರೆಮರೆಗೆ ಸರಿಯುತ್ತಿವೆ . ಆದರೆ ಇಲ್ಲೊಂದು ಬುಡಕಟ್ಟು ಸಮುದಾಯವೆಂದೇ ಗುರುತಿಸಿಕೊಂಡಿರುವ ಕಾಡುಗೊಲ್ಲ ಸಮುದಾಯದವರು ಮಾತ್ರ ಸಾಂಪ್ರದಾಯಿಕ ಆಚರಣೆಗಳನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬರುವ ಮೂಲಕ ಜನಪದ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ.
ಸದ್ಯ ಇದೇ ರೀತಿಯ ಜಾತ್ರೆಯೊಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರುಶುರಾಮಪುರ ವ್ಯಾಪ್ತಿಯ ಪುರ್ಲಹಳ್ಳಿಯ ವಸಲುದಿಬ್ಬದಲ್ಲಿ ಕಾಡುಗೊಲ್ಲರು ತಮ್ಮ ಆರಾಧ್ಯ ದೈವ ಕ್ಯಾತೆದೇವರ ಮುಳ್ಳಿನ ಜಾತ್ರೆಯನ್ನು ಬಹಳ ವಿಜೃಂಭಣೆ ಹಾಗೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಕೆಲವೇ ನಿಮಿಷಗಳಲ್ಲಿ ಭಕ್ತಿಯಿಂದ ಮುಳ್ಳಿನ ದೇವರ ಗುಡಿಯನ್ನು ಪೈಪೋಟಿಯಲ್ಲಿ ನಿರ್ಮಿಸುತ್ತಾರೆ. ಅಂದಹಾಗೆ
ಚಿತ್ರದುರ್ಗ ಜಿಲ್ಲೆಯ ಕೋಣನ ಗೊಲ್ಲರು ಮತ್ತು ಬೊಮ್ಮನ ಗೊಲ್ಲರು ಬರೀ ಕಾಲಲ್ಲಿ ಮುಳ್ಳಿನ ಗುಡಿಯನ್ನು ಪರಸ್ಪರ ಪೈಪೋಟಿಯಲ್ಲಿ ನಿರ್ಮಿಸುತ್ತಾರೆ. ಅರ್ಧ ಗುಡಿಯನ್ನು ಕೋಣನ ಗೊಲ್ಲರು ಉಳಿದರ್ಧ ಗುಡಿಯನ್ನು ಬೊಮ್ಮನ ಗೊಲ್ಲರು ಗುಡಿಯನ್ನು ನಿರ್ಮಿಸುತ್ತಾರೆ.
ಈಗಾಗಲೇ ಜಾತ್ರೆ ಆರಂಭವಾಗಿದ್ದು, ಈ ಜಾತ್ರೆಗೆ 10 ದಿನಗಳ ಮುಂಚೆಯೇ ಪುರ್ಲಹಳ್ಳಿ ನಾಯಕ ಜನಾಂಗದ ಭಕ್ತರೊಬ್ಬರ ಜಮೀನಿನಲ್ಲಿ ಬೆಳೆದ ಹತ್ತಿ ಮರವನ್ನು ಪೂಜಿಸಿ, ಅದನ್ನು ಕಡಿದು ತಂದು ವಸಲುದಿಬ್ಬಕ್ಕೆ ತರುತ್ತಾರೆ. ನಂತರ ಕ್ಯಾತೆದೇವರ ಜಾತ್ರೆಗೆ ಬಾರೆ ಕಳ್ಳೆ, ಕಾರೇ ಕಳ್ಳೆ, ಹಾಗೂ ಜಾಲಿಮುಳ್ಳು ಕಳ್ಳೆಯನ್ನು ಕಡಿದು ತಂದು 15 ಅಡಿ ಅಗಲ ಮತ್ತು 21 ಅಡಿ ಎತ್ತರದ ಮುಳ್ಳಿನ ದೇವರ ಗುಡಿಯನ್ನು ನಿರ್ಮಾಣ ಮಾಡುತ್ತಾರೆ. ಹೀಗೆ ನಿರ್ಮಿಸಿದ ಗುಡಿಯಲ್ಲಿ ಚನ್ನಮ್ಮ ನಾಗತಿಹಳ್ಳಿಯ ಕ್ಯಾತೆದೇವರು, ಬಂಜಗೆರೆ ಈರಣ್ಣ, ಐಗಾರ್ಲಹಳ್ಳಿಯ ತಾಳಿ ದೇವರನ್ನ ಪ್ರತಿಷ್ಠಾಪಿಸುತ್ತಾರೆ.
ಹೀಗೆ ಕಾಡುಗೊಲ್ಲ ಸಮುದಾಯದವರು ಭಕ್ತಿಯಿಂದ ಮುಳ್ಳಿನ ಗುಡಿಯನ್ನು ನಿರ್ಮಿಸಿದ ನಂತರ ಗೋಪುರದ ತುದಿಯಲ್ಲಿ ಕಂಚಿನ ಕಳಶವನ್ನು ಪ್ರತಿಷ್ಠಾಪಿಸಿ ನಂತರ ಆ ಕಳಶವನ್ನು ಕೀಳುವ ಜಾತ್ರೆ ಇದಾಗಿರುತ್ತದೆ. ಕಳಸ ಪ್ರತಿಷ್ಠಾಪನೆ ಮಾಡಿದ ನಂತರ ಐದನೇ ದಿನ ಅಂದರೆ ಸೋಮವಾರ ಐದು ಜನ ವೀರಗಾರರು ಅರೆ ಬೆತ್ತಲೆಯಾಗಿ ಬರೀ ಕಾಲಿನಲ್ಲಿ ಮುಳ್ಳಿನ ಗೋಪುರ ಹತ್ತಿ ಕಳಶ ಕೀಳುವ ಸ್ಪರ್ಧೆ ಇದಾಗಿರುತ್ತದೆ. ಈ ವರ್ಷ ದ್ವರನಕುಂಟೆ ಈರಗಾರ ಕಳಸ ಮೊದಲು ಕಿತ್ತು ಕೆಳೆಗಿಳಿದ.
ಕ್ಯಾತೇದೇವರು ಪಶುಪಾಲಕನಿಗೆ ಒಲಿದ ದೇವರಾಗಿದ್ದು,
ಕ್ಯಾತೆದೇವರಿಗೆ ಸೇರಿದ 13 ಗುಡಿಕಟ್ಟಿನ ಅಣ್ಣ-ತಮ್ಮಂದಿರು ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಾರೆ. ಈ ಕಾಡುಗೊಲ್ಲ ಸಮುದಾಯವು ಒಂದು ತಿಂಗಳ ಕಾಲ “ನವಣೆ” ವ್ರತ ಆಚರಿಸುತ್ತಾರೆ. ಏಕೆಂದರೆ ಕ್ಯಾತೆ ದೇವರು ಕಾಡು
ಗೊಲ್ಲರಿಗೆ ಒಲಿಯುವ ಮುನ್ನ ಹೇಮರೆಡ್ಡಿ ಮತ್ತು ಭೀಮರೆಡ್ಡಿ ಗೌಡನಿಗೆ ಒಲಿದಿರುತ್ತದೆ. ಆದರೆ, ರೆಡ್ಡಿ ಅವರು ನಿರ್ಲಕ್ಷ ತೋರಿ ಮನೆಯ ದೇವರನ್ನು “ಹುರುಳಿ – ನವಣೆ” ಕಣಜದಲ್ಲಿ ಮುಚ್ಚಿ ಹಾಕಿದ್ದನಂತೆ, ಹೀಗಾಗಿ ರೆಡ್ಡಿ ದುರಹಂಕಾರದಿಂದ ಕ್ಯಾತೆದೇವರು ರೆಡ್ಡಿಗರ ಮನೆಯಲ್ಲಿ ಪಶುಪಾಲಕನಾಗಿದ್ದ ಕಾಡುಗೊಲ್ಲರ ಬೊಮ್ಮಲಿಂಗ ಎಂಬುವನಿಗೆ ಒಲಿದಿದೆ ಎಂಬ ಪ್ರತೀತಿ ಇದೆ.
ಒಟ್ಟಾರೆಯಾಗಿ ಬುಡಕಟ್ಟು ಕಾಡುಗೊಲ್ಲ ಸಮುದಾಯದವರು ಪೂರ್ವಜರಿಂದ ಆಚರಣೆ ಮಾಡಿಕೊಂಡು ಬಂದಿರುವ ಜಾತ್ರೆ ಇದಾಗಿದ್ದು, ನೋಡುಗರ ಮೈ ಜುಮ್ ಎನ್ನುತ್ತದೆ. ಈ ಜಾತ್ರೆಗೆ ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ತುಮಕೂರು, ಬೆಂಗಳೂರು ಸೇರಿದಂತೆ ನೆರೆಯ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಭಕ್ತರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ.