ಇತ್ತೀಚಿನ ಸುದ್ದಿ
ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನೆ; ಅಧಿಕಾರಿಗಳ ಕಾರ್ಯವೈಖರಿ ತೃಪ್ತಿ ತಂದಿದೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಏಕ್ ರೂಪ್ ಕೌರ್
20/12/2023, 16:48
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ವಿಷಯವಾಗಿ ಅಧಿಕಾರಿಗಳು ಮತ್ತು ಬಿಎಲ್ ಓ ಗಳ ಕಾರ್ಯವೈಖರಿ ತೃಪ್ತಿ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸರ್ಕಾರದ ಕಾರ್ಯದರ್ಶಿಗಳು, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಏಕ್ ರೂಪ್ ಕೌರ್ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾಗಿ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ರಾಜಕೀಯ ಪಕ್ಷದ ಪ್ರತಿನಿಧಿಗಳು ಮತದಾರರ ಪಟ್ಟಿಯಲ್ಲಿ 2-3 ನಮೂದುಗಳಿರುವುದು ಕಂಡುಬರುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಿದರು.
ಕಾರ್ಯದರ್ಶಿಗಳು ಮಾತನಾಡಿ ಪ್ರಸ್ತುತ ಅಭಿವೃದ್ಧಿ ಪಡಿಸಲಾದ ತಂತ್ರಾಂಶದಲ್ಲಿ ಭಾವಚಿತ್ರ ಗಳನ್ನು ಆಧರಿಸಿ ನಕಲು ನಮೂದುಗಳನ್ನು ಗುರುತಿಸಬಹುದಾಗಿದೆ. ಅಂತೆಯೇ ದತ್ತಾಂಶ ವನ್ನು ಆಧರಿಸಿ ಸಹ ನಕಲು ನಮೂದುಗಳನ್ನು ಗುರುತಿಸಲಾಗುತ್ತಿದೆ.
ಮತದಾರರ ಪಟ್ಟಿಯಲ್ಲಿ ನಕಲು ನಮೂದುಗಳನ್ನು ಸಂಬಂದಿಸಿದ ಮತದಾರರಿಗೆ ನೋಟೀಸ್ ನೀಡಿ ಅವರ ಅಭಿಪ್ರಾಯದಂತೆ ಯಾವುದೇ ಒಂದು ನಮೂದನ್ನು ಹೊರತುಪಡಿಸಿ ಉಳಿದ ನಮೂದುಗಳನ್ನು ರದ್ದು ಪಡಿಸಲಾಗುತ್ತಿದೆ ಎಂದರು.
ಚುನಾವಣೆ ಆಯೋಗದ ನಿರ್ದೇಶನ ದಂತೆ ಬಿ ಎಲ್ ಓ ಗಳು ಈಗಾಗಲೇ ಮನೆ ಮನೆ ಸಮೀಕ್ಷೆ ನಡೆಸಿ ಆಯೋಗ ನಿಗಧಿಪಡಿಸಿರುವ 69 ಅಂಶಗಳ ಸಮೀಕ್ಷೆಯನ್ನು ಸಂಗ್ರಹಿಹಿಸಿ ಡಿಜಿಟಲೀಕರಣ ಮಾಡಿ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.
ಈ ಸಮೀಕ್ಷೆಗೆ ಪೂರಕವಾಗಿ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಸಹಯೋಗವನ್ನು ಪಡೆದುಕೊಂಡು ಮೃತ ಮತದಾರರು ಹಾಗೂ ವರ್ಗವಾದ ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗುತ್ತಿದೆ. ಇದರಿಂದ ಲೋಪರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಸಾಧ್ಯವಾಗುತ್ತದೆ ಎಂದರು.
ಮನೆ ಮನೆ ಸಮೀಕ್ಷೆಯಿಂದ ಹೊಸ ನೋಂದಣಿ ಕಾರ್ಯವನ್ನು ಬಿ ಎಲ್ ಓ ಆಪ್ ನಲ್ಲಿ ನೇರವಾಗಿ ನಮೂದಿಸುತ್ತಿರುವುದರಿಂದ ತಿದ್ದುಪಡಿಗೆ ಹೆಚ್ಚು ಅವಕಾಶವಿಲ್ಲದೆ ತಿದ್ದುಪಡಿ ಅರ್ಜಿಗಳು ಬಹಳಷ್ಟು ಸಂಖ್ಯೆಯಲ್ಲಿ ಕಡಿಮೆಯಾಗಿವೆ ಎಂದರು.
ಹಲವು ಮತದಾರರು ದೋಷಪೂರಿತ ಎಪಿಕ್ ಗಳನ್ನು ತಿದ್ದುಪಡಿ ಮಾಡದೆ ಹೊಸ ಎಪಿಕ್ ಗಳಿಗೆ ನೋಂದಣಿ ಮಾಡಿರುವುದೇ ನಕಲು ನಮೂದುಗಳಿಗೆ ಕಾರಣವಾಗಿರುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಎಂದು ತಿಳಿಸಿದರು.
ಸಭೆಯ ನಂತರ ನಗರದ ಅಮ್ಮವಾರಿಪೇಟೆ ಹಾಗೂ ಸಂತೆ ಮೈದಾನದ ಮತಗಟ್ಟೆಗಳನ್ನು ಪರಿಶೀಲಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ. ಶಂಕರ್ ವಾಣಿಕ್ಯಳ್, ಉಪ ವಿಭಾಗಾಧಿಕಾರಿಗಳಾದ ವೆಂಕಟಲಕ್ಷ್ಮಿ, ಎಲ್ಲ ತಾಲ್ಲೂಕುಗಳ ತಹಸೀಲ್ದಾರ್ ಗಳು, ಪ್ರಮುಖ ರಾಜಕೀಯ ಪಕ್ಷದ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.