ಇತ್ತೀಚಿನ ಸುದ್ದಿ
ಚಂಡಮಾರುತದ ಅಬ್ಬರ: ಕಡವಿನಬಾಗಿಲು ನಂದಿನಿ ನದಿ ಬದಿಯಲ್ಲಿ ಕಟ್ಟಲಾಗಿರುವ ರಸ್ತೆ ತಡೆಗೋಡೆ ಕುಸಿತ
17/05/2021, 20:06

ಹಳೆಯಂಗಡಿ(reporterkarnataka news);
ಹೊಯ್ಗೆಗುಡ್ಡೆ-ಕದಿಕೆ ನದಿ ಬದಿ ಮೂಲಕ ಚಿತ್ರಾಪು ಮತ್ತು ಸಸಿಹಿತ್ಲುಗಳನ್ನು ಸಂಪರ್ಕಿಸುವ ನೇರ ಸಂಪರ್ಕ ರಸ್ತೆಗೆ ಕಡವಿನಬಾಗಿಲು ಸಮೀಪ ನಂದಿನಿ ನದಿಯ ಬದಿಯಲ್ಲಿ ಕಟ್ಟಲಾಗಿರುವ ರಸ್ತೆ ತಡೆಗೋಡೆ ಕುಸಿದಿದೆ.
2015ರಲ್ಲಿ ರಸ್ತೆ ನಿರ್ಮಾಣವಾದಂದಿನಿಂದಲೂ ಈ ಸ್ಥಳದಲ್ಲಿ ರಸ್ತೆ ತಡೆಗೋಡೆ ಬೇರೆ ಬೇರೆ ಕಡೆಗಳಲ್ಲಿ ಹಲವು ಬಾರಿ ಕುಸಿದಿದೆ. ಪ್ರಸಕ್ತ ಕುಸಿದಿರುವ ತಡೆಗೋಡೆ ಕಳೆದ ವರ್ಷವೇ ಬಿರುಕುಬಿಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಬಿರುಕು ಹೆಚ್ಚುತ್ತಾ ಹೋಗಿತ್ತು. ಕೊನೆಗೆ ಮೊನ್ನೆಯ ‘ತೌಕ್ತೆ’ ಚಂಡಮಾರುತದ ನೀರಿನ ಪ್ರವಾಹ ಮತ್ತು ಅಬ್ಬರದ ಅಲೆಗಳ ಆಘಾತಕ್ಕೆ ಕುಸಿದು ಹೋಗಿದೆ.
ಈ ರಸ್ತೆಯು ಕದಿಕೆ-ಹೊಯ್ಗೆಗುಡ್ಡೆ ಪ್ರದೇಶದ ಜೀವನಾಡಿಯಾಗಿದ್ದು, ಚಿತ್ರಾಪು ಮತ್ತು ಸಸಿಹಿತ್ಲುಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈಗಾಗಲೇ ಮಳೆಗಾಲ ಆರಂಭವಾಗಿದೆ. ರಸ್ತೆಯು ಮಳೆಗಾಲದಲ್ಲಿ ನಂದಿನಿ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಮುನ್ನ ತಕ್ಷಣ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ಹೊಯ್ಗೆಗುಡ್ಡೆ, ಕದಿಕೆ, ಚಿತ್ರಾಪು, ಸಸಿಹಿತ್ಲು, ಹಳೆಯಂಗಡಿ, ಪಡುಪಣಂಬೂರಿನ ಜನರು ಮೀನುಗಾರಿಕಾ ಇಲಾಖೆಯ ಎಂಜಿನಿಯರ್ ಗಳನ್ನು ಒತ್ತಾಯಿಸಿದ್ದಾರೆ.