ಇತ್ತೀಚಿನ ಸುದ್ದಿ
ಸೈಬರ್ ಕ್ರೈಂ ತಡೆಗೆ ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿಗಳಿಗೆ ತರಬೇತಿ: ಗೃಹ ಸಚಿವ ಡಾ. ಪರಮೇಶ್ವರ್
29/10/2023, 19:47
ಮಂಗಳೂರು(reporterkarnataka.com): ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಇರುವವರಿಗೆಲ್ಲ ಸೈಬರ್ ಕ್ರೈಂ ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಅವರು ಭಾನುವಾರ ನಗರದ ಶಸ್ತ್ರಸ್ತ್ರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಳೆದ 6 ತಿಂಗಳಿಂದ ಅಪರಾಧ ಪ್ರಕರಣಗಳು ಇಳಿಮುಖವಾಗಿದ್ದು, ಸೈಬರ್ ಕ್ರೈ ಪ್ರಕರಣಗಳು ಮಾತ್ರ ಹೆಚ್ಚುತ್ತಲೇ ಇವೆ. ಆದುದರಿಂದ ಪೊಲೀಸ್ ಇಲಾಖೆಯಲ್ಲಿ ಇರುವವರಿಗೆಲ್ಲ ಸೈಬರ್ ಕ್ರೈಂ ತರಬೇತಿ ನೀಡಲಾಗುವುದು ಎಂದರು.
ಮೊದಲು ಪೊಲೀಸ್ ಇಲಾಖೆಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಆದವರು ಬರುತ್ತಿದ್ದರು. ಆದರೆ ಈಗ ಸ್ನಾತಕೋತ್ತರ ಪದವಿ, ಡಬಲ್ ಪದವಿ, ಇಂಜಿನಿಯರಿಂಗ್ ಅದವರೆಲ್ಲ ಬರುತ್ತಿದ್ದಾರೆ. ಅವರಿಗೆ ಕಂಪ್ಯೂಟರ್ ತರಬೇತಿ, ಸೈಬರ್ ಕ್ರೈಂ ಬಗ್ಗೆ ತರಬೇತಿ ನೀಡುವುದು ಸುಲಭ ಎಂದು ಗೃಹ ಸಚಿವರು ಅಭಿಪ್ರಾಯಪಟ್ಟರು.
ಪೊಲೀಸ್ ಇಲಾಖೆಯನ್ನು ಹಾಗೂ ಸಿಬ್ಬಂದಿಗಳನ್ನು ಆಧುನಿಕರಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುವುದು. ಈಗಾಗಲೇ ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳು ಹಳೆಯದಾಗಿದ್ದು, ಅದನ್ನು ಆಧುನಿಕರಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆ ಯೋಜನೆಯಡಿ ನೂತನ 100 ಪೊಲೀಸ್ ಠಾಣೆಗಳನ್ನು ತೆರೆಯಲಾಗುವುದು. ಮುಂದಿನ ದಿನಗಳಲ್ಲಿ ಬಾಕಿ ಇರುವ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ‘ಪೊಲೀಸ್ ಗೃಹ’ ಯೋಜನೆಯಡಿ ಶೇ.40ರಷ್ಟು ಎರಡು ಬೆಡ್ ರೂಂಗಳ ಫ್ಲಾಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ನಾಲ್ಕು ವರ್ಷದಲ್ಲಿ ಶೇ.70 ರಷ್ಟು ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವರು ನುಡಿದರು.