ಇತ್ತೀಚಿನ ಸುದ್ದಿ
ತೊಕ್ಕೊಟ್ಟು ಸೇತುವೆಯಲ್ಲಿ ಸರಣಿ ಅಪಘಾತ: 6 ವಾಹನಗಳಿಗೆ ಹಾನಿ; ಹಲವರಿಗೆ ಸಣ್ಣಪುಟ್ಟ ಗಾಯ; 2 ತಾಸು ಸಂಚಾರ ವ್ಯತ್ಯಯ
16/10/2023, 21:29
ಮಂಗಳೂರು(reporterkarnataka.com): ನಗರದ ಹೊರವಲಯದ ತೊಕ್ಕೊಟ್ಟು ಸೇತುವೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುಮಾರು 2 ತಾಸು ಸಂಚಾರ ಸ್ಥಗಿತಗೊಂಡಿತು.
ಸೇತುವೆಯ ಮಧ್ಯದಲ್ಲಿ ಲಾರಿಯೊಂದು ಕೆಟ್ಟು ನಿಂತು ಅಪಘಾತದ ಸರಮಾಲೆಗೆ ಕಾರಣವಾಯಿತು. ಸರಣಿ ಅಪಘಾತದಲ್ಲಿ 6 ವಾಹನಗಳಿಗೆ ಹಾನಿಗೀಡಾಗಿವೆ.
ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಲಾರಿಯೊಂದು ಸೇತುವೆ ಮಧ್ಯಭಾಗದಲ್ಲಿ ಕೆಟ್ಟು ನಿಂತಿತ್ತು. ಇದೇ ಸಮಯದಲ್ಲಿ ಭಾರೀ ಮಳೆ ಆರಂಭವಾಗಿತ್ತು. ಇದರ ಪರಿಣಾಮ ನಿಯಂತ್ರಣ ಕಳೆದುಕೊಂಡ ಆಲ್ಟೊ ಕಾರೊಂದು ಲಾರಿ ಹಿಂಬದಿಗೆ ಢಿಕ್ಕಿ ಹೊಡೆಯಿತು. ಬಳಿಕ ಅಪಘಾತದ ಸರಮಾಲೆಯೇ ತೆರೆದುಕೊಂಡಿತು. ಒಂದರ ಹಿಂದೆ ಇನ್ನೊಂದರಂತೆ ರಿಟ್ಸ್ ಕಾರು, ಕಾಂಟೆಸ್ಸಾ ಕಾರು, ಪಿಕಪ್ ವಾಹನ ಹಾಗೂ ಖಾಸಗಿ ಬಸ್ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸರಣಿ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 2 ತಾಸು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ವಾಹನಗಳನ್ನು ತೆರವು ಮಾಡಿದರು.