ಇತ್ತೀಚಿನ ಸುದ್ದಿ
ದೊಂಬಿ, ಗಲಭೆ ಪ್ರಕರಣ: ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ
16/10/2023, 16:01
ಮಂಗಳೂರು(reporterkarnataka.com):ದೊಂಬಿ, ಗಲಾಟೆ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನಗರದ ಬಜಾಲ್ ಪೈಜಲ್ ನಗರದ ನಿವಾಸಿ ತೌಸೀಫ್ (27) ಎಂದು ಗುರುತಿಸಲಾಗಿದೆ. ಆರೋಪಿಯು 4 ವರ್ಷಗಳಿಂದ ದಸ್ತಗಿರಿಗೆ ಸಿಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರಲ್ಲಿ ನಡೆದ ಗಲಾಟೆ, ದೊಂಬಿ ಹಾಗೂ ಮಾರಣಾಂತಿಕ ಹಲ್ಲೆಯಂತಹ ಮೂರು ಪ್ರಕರಣದಲ್ಲಿ ಭಾಗಿಯಾದ ಆರೋಪ ಈತನ ಮೇಲಿದೆ. ಮಂಗಳೂರು ಗ್ರಾಮಾಂತರ ಪೊಲೀಸರು ಮಾಹಿತಿ ಸಂಗ್ರಹಿಸಿ ಈತನ ಪತ್ತೆಯ ಕುರಿತು ಲುಕ್ ಔಟ್ ನೋಟೀಸು (LOC) ಹೊರಡಿಸಿದ್ದರು.
ಇದೀಗ ಅ.14ರಂದು ಸೌದಿ ಅರೇಬಿಯಾದ ರಿಯಾದ್ ನಿಂದ ಮಂಗಳೂರಿಗೆ ಬರಲು ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಮುಂಬೈನ ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ಪರಿಶೀಲಿಸಿ ಆತನ ವಿರುದ್ಧ ಲುಕ್ ಔಟ್ ನೋಟೀಸು (LOC) ಹೊರಡಿಸಿದ ಬಗ್ಗೆ ಖಚಿತಪಡಿಸಿಕೊಂಡು ಮಂಗಳೂರು ಗ್ರಾಮಾಂತರ ಪೊಲೀಸು ಠಾಣೆಗೆ ಇಮಿಗ್ರೇಷನ್ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಮಾಹಿತಿಯಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿ ಆತನನು ವಶಕ್ಕೆ ಪಡೆದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ತೌಸೀಫ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.