ಇತ್ತೀಚಿನ ಸುದ್ದಿ
ಬಿಜೆಪಿ ಟಿಕೆಟ್ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಅಸ್ವಸ್ಥ: ಆಸ್ಪತ್ರೆಗೆ ದಾಖಲು
15/09/2023, 10:47

ಬೆಂಗಳೂರು(reporterkarnataka.com): ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ
ಬಹುಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಹಿಂದುತ್ವದ ಪ್ರತಿಪಾದಕಿ, ಮಹಾನ್ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಬೆಳಗ್ಗೆ ವಿಚಾರಣೆ ನಡೆಸುತ್ತಿದ್ದ ವೇಳೆ ಚೈತ್ರಾ ಅವರು ಕುಸಿದು ಬಿದ್ದರು. ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಚೈತ್ರಾ ಅವರನ್ನು ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಪೊಲೀಸ್ ವಿಚಾರಣೆಗಾಗಿ ಬೆಳಗ್ಗೆ ಅವರನ್ನು ಸಿಸಿಬಿ ಕಚೇರಿಗೆ ಕರೆದು ತರಲಾಗಿತ್ತು.
ಬೈಂದೂರು ಮೂಲದ ಮುಂಬಯಿಯ ಉದ್ಯಮಿ ಗೋವಿಂದ ಬಾಬು ಎಂಬವರಿಗೆ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಚೈತ್ರಾ ಕುಂದಾಪುರ ಹಾಗೂ ಟೀಮ್ ಮೇಲೆ ಆರೋಪಿಸಲಾಗಿದೆ. ತಲೆಮರೆಸಿಕೊಂಡಿದ್ದ ಚೈತ್ರಾ ಅವರನ್ನು ಉಡುಪಿಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.