ಇತ್ತೀಚಿನ ಸುದ್ದಿ
ಕರಾವಳಿಯಲ್ಲಿ ಭಾರೀ ಮಳೆ: ಮಂಗಳೂರಿನಲ್ಲಿ ಖೈಬರ್ ಪಾಸ್ ಗುಡ್ಡ ಕುಸಿತ; ಟ್ರಾಫಿಕ್ ಸಿಗ್ನಲ್ ಢಮಾರ್
05/07/2023, 11:49
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಕಳೆದ ಎರಡು ದಿನಗಳಿಂದ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳೂರಿನ ಪಿವಿಎಸ್ ಬಳಿಯ ಖೈಬರ್ ಪಾಸ್ ನ ಗುಡ್ಡ ಕುಸಿದಿದೆ. ಹಂಪನಕಟ್ಟೆಯ ಸಿಗ್ನಲ್ ಕೆಟ್ಟು ಹೋಗಿದೆ.
ಮುಂಗಾರು ಆರಂಭವಾಗಿ ಸುಮಾರು 33 ದಿನಗಳ ಬಳಿಕ ಸೋಮವಾರ ಕರಾವಳಿಯಲ್ಲಿ ಬಿರುಸಿನ ಮಳೆ ಬಿದ್ದಿತ್ತು. ಅಂದು ಮಂಗಳೂರಿನಲ್ಲಿ 100 ಮಿಮೀಗೂ ಅಧಿಕ ಮಳೆ ಸುರಿದಿತ್ತು. ಒಂದೇ ದಿನದ ಮಳೆಗೆ ನಗರದ ಉತ್ತರ ದಿಕ್ಕಿನ ಹೆಬ್ಬಾಗಿಲು ಎಂದೇ ಪರಿಗಣಿಸಲಾದ ಪಂಪ್ ವೆಲ್ ಪ್ರದೇಶ ಜಲಾವೃತವಾಗಿತ್ತು. ಇದರಿಂದ ವಾಹನ ಸವಾರರು, ಪಾದಚಾರಿಗಳು ನರಕಯಾತನೆ ಅನುಭವಿಸಿದ್ದಲ್ಲದೆ ಇಡೀ ನಗರವೇ ಟ್ರಾಫಿಕ್ ಜಾಮ್ ಉಂಟಾಗಿತ್ತು.
ವಾಸ್ತವದಲ್ಲಿ ರಾಜ್ಯದಲ್ಲಿ ಮುಂಗಾರು ಆರಂಭದಿಂದಲೇ ದುರ್ಬಲವಾಗಿತ್ತು. ಜೂನ್ ತಿಂಗಳು ಇಡೀ ಮಳೆ ಇಲ್ಲದೆ ಕಳೆದು ಹೋಯಿತು. ಇದೀಗ ಜುಲೈ ಮೊದಲ ವಾರದಲ್ಲಿ ನಿನ್ನೆ ಮತ್ತು ಮೊನ್ನೆ ಮಂಗಳೂರಿನಲ್ಲಿ ಭಾರಿ ಮಳೆಯಾಗಿದೆ. ಇಂದು ಕೂಡ ಬಿರುಸಿನ ಮಳೆಯಾಗುತ್ತಿದೆ. ಇದರ ಪರಿಣಾಮ ತಗ್ಗು ಪ್ರದೇಶ ಜಲಾವೃತವಾಗಿದೆ. ನಗರದ ಹೃದಯ ಭಾಗದ ಹಂಪನಕಟ್ಟೆ ಯ ಸಿಗ್ನಲ್ ಕೆಟ್ಟು ಹೋಗಿದೆ. ಇದರ ನಿರ್ವಹಣೆ ಮಂಗಳೂರು ಮಹಾನಗರಪಾಲಿಕೆಯದ್ದಾಗಿದೆ. ಪಿವಿಎಸ್ ಬಳಿಯ ಖೈಬರ್ ಪಾಸ್ ನ ಗುಡ್ಡ ಕುಸಿದಿದೆ. ಇಲ್ಲಿನ ಹಳೆಯ ಕಟ್ಟಡಕ್ಕೆ ಕುಸಿತದ ಭೀತಿಯುಂಟಾಗಿದೆ.
ರಸ್ತೆ ಹಾಗೂ ಮಳೆ ನೀರು ತೋಡಿನ ಅವೈಜ್ಞಾನಿಕ ಕಾಮಗಾರಿಯಿಂದ ಹಾಗೂ ಅಲ್ಲಲ್ಲಿ ಕಟ್ಟಡ ಕಾಮಗಾರಿಯ ಸಾಮಗ್ರಿಗಳು ತೋಡು ಮುಚ್ಚಿರುವುದರಿಂದ ಕೃತಕ ನೆರೆ ಉಂಟಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ರಾಜ ಕಾಲುವೆಗಳ ಒತ್ತುವರಿ ರಸ್ತೆಗೆ ನೀರು ನುಗ್ಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.