ಇತ್ತೀಚಿನ ಸುದ್ದಿ
ಪ್ರತಿಪಕ್ಷದ ನಾಯಕನಿಲ್ಲದೆ ರಾಜ್ಯ ವಿಧಾನಸಭೆ ಅಧಿವೇಶನ ಆರಂಭ: ವೀಕ್ಷಕರಿಂದ ಬಿಜೆಪಿ ಶಾಸಕರ ಭೇಟಿ
03/07/2023, 14:04
ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.com
ರಾಜ್ಯ ವಿಧಾನಸಭೆ ಅಧಿವೇಶನ ಕೊನೆಗೂ ಪ್ರತಿಪಕ್ಷದ ನಾಯಕನಿಲ್ಲದೆ ಆರಂಭಗೊಂಡಿದೆ. ಚುನಾವಣೆ ಫಲಿತಾಂಶ ಹೊರಬಿದ್ದು ಹೆಚ್ಚು ಕಡಿಮೆ ಒಂದೂವರೆ ತಿಂಗಳು ಕಳೆದರೂ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕ ಆಯ್ಕೆ ಮಾಡುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಛಾಯಾ ಮುಖ್ಯಮಂತ್ರಿ ಎಂದೇ ಪರಿಗಣಿಸಲಾದ ಪ್ರತಿಪಕ್ಷದ ನಾಯಕನಿಲ್ಲದೆ ಅಧಿವೇಶನ ಆರಂಭಗೊಂಡಿದೆ.
ಪ್ರತಿಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷದ ಹೈಕಮಾಂಡ್ ಭಾನುವಾರ ದಿಢೀರ್ ಆಗಿ ದೆಹಲಿಗೆ ಕರೆಸಿತ್ತು. ಭಾನುವಾರ ತಡರಾತ್ರಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಯಡಿಯೂರಪ್ಪ ಅವರು ಭೇಟಿಯಾಗಿದ್ದರು.
ಪ್ರತಿಕ್ಷದ ನಾಯಕರ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ ನಂತರ ಸೋಮವಾರ ಕರ್ನಾಟಕಕ್ಕೆ ವೀಕ್ಷಕರನ್ನು ಕಳುಹಿಸಲು ನಿರ್ಧರಿಸಿದ್ದಾರೆ.
ವೀಕ್ಷಕರು ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ ಎಂದು ಯಡಿಯೂರಪ್ಪ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪಕ್ಷದ ತೀರ್ಮಾನವೇ ಅಂತಿಮವಾಗಿರುತ್ತದೆ. ಅವರು ಸೋಮವಾರ ವೀಕ್ಷಕರನ್ನು ಕಳುಹಿಸುತ್ತಿದ್ದಾರೆ. ವೀಕ್ಷಕರು ಸಂಗ್ರಹಿಸಿದ ಅಭಿಪ್ರಾಯದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಜೆಪಿ ನಾಯಕ ಯಡಿಯೂರಪ್ಪ ಹೇಳಿದ್ದಾರೆ.
ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಅಧಿಕಾರಕ್ಕೆ ಬಂದರೆ, ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನಗಳನ್ನು ಗೆದ್ದುಕೊಂಡಿತು.