ಇತ್ತೀಚಿನ ಸುದ್ದಿ
ಸಂಸತ್ ಚುನಾವಣೆ: ಮೈಸೂರು – ಯತೀಂದ್ರ, ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ, ಮಂಗಳೂರು – ಪದ್ಮರಾಜ್, ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಗಳು ?
11/06/2023, 10:30
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಈಗಾಗಲೇ ಸಿದ್ದತೆಯಲ್ಲಿ ತೊಡಗಿವೆ. ಬಿಜೆಪಿಗೆ ಕಳೆದ ಸಂಸತ್ ಚುನಾವಣೆಯಲ್ಲಿ ಗಳಿಸಿದ 25 ಸ್ಥಾನಗಳನ್ನು ಉಳಿಸುವುದೇ ದೊಡ್ಡ ಸವಾಲಾದರೆ, ಕಾಂಗ್ರೆಸ್ ಗೆ ಕನಿಷ್ಠ 20 ಸ್ಥಾನಗಳನ್ನು ಗಳಿಸುವುದೇ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಉಭಯ ಪಕ್ಷಗಳು ರಣತಂತ್ರ ರೂಪಿಸುವಲ್ಲಿ ತೊಡಗಿವೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ ಹುಮ್ಮನಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷ, ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಟಾರ್ಗೆಟ್ ಹಾಕಿಕೊಂಡಿದೆ. ಹಾಗೆ 25 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಕೂಡ ಮಾನ ಉಳಿಸಿಕೊಳ್ಳಲು ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಹೆಣಗಾಡುತ್ತಿದೆ. ಉಭಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಶೋಧ ಆರಂಭವಾಗಿದೆ. ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿದ್ದ ಜನತಾ ದಳವನ್ನು ವಿಧಾನಸಭೆ ಚುನಾವಣೆಯಲ್ಲಿ ಮಕಾಡೆ ಮಲಗಿಸಿದ್ದ ಕಾಂಗ್ರೆಸ್ ಈ ಬಾರಿ ಮೈಸೂರು ಕ್ಷೇತ್ರವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಕೈಗೆತ್ತಿಕೊಂಡಿದೆ. ಇಲ್ಲಿ ಪ್ರಬಲ ನಾಯಕನನ್ನು ಅಖಾಡಕ್ಕಿಸಲು ಸಿದ್ಧತೆ ನಡೆಸಿದೆ. ಬಿಜೆಪಿ ಹಾಲಿ ಸಂಸದ ಪ್ರತಾಪ ಸಿಂಹ ಅವರನ್ನು ಸೋಲಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿಕೊಳ್ಳುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ವರುಣಾದಲ್ಲಿ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಬಿಟ್ಟುಕೊಟ್ಟ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಪ್ರತಾಪ್ ಸಿಂಹ ಎದುರು ಕಣಕ್ಕಿಳಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಅದೇ ರೀತಿ ಬಿಜೆಪಿಯ ಇನ್ನೊರ್ವ ಪ್ರಭಾವೀ ಸಂಸದ ತೇಜಸ್ವಿ ಸೂರ್ಯ ಅವರನ್ನು ಮಣಿಸಲು ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಅನುಭವಿಸಿದ ಸೌಮ್ಯಾ ರೆಡ್ಡಿ ಅವರನ್ನು ಅಖಾಡಕ್ಕಿಸಲು ತಯಾರಿ ನಡೆದಿದೆ. ಶಿವಮೊಗ್ಗ ಕ್ಷೇತ್ರದಿಂದ ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗುವ ಬಹುತೇಕ ಸಾಧ್ಯತೆಗಳಿವೆ. ಗೀತಾ ಶಿವರಾಜ್ ಕುಮಾರ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದರು. ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸತತವಾಗಿ ಗೆಲ್ಲುತ್ತಿರುವ ಮಂಗಳೂರು(ದಕ್ಷಿಣ ಕನ್ನಡ) ಕ್ಷೇತ್ರದಿಂದ ನ್ಯಾಯವಾದಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಪದ್ಮರಾಜ್ ಅವರು ಕುದ್ರೋಳಿ ಗೋಕರ್ಣನಾಥ ದೇಗುಲದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅವರ ಹಿತೈಷಿಗಳು ಒತ್ತಾಯಿಸಿದ್ದರು. ಇನ್ನು ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯ ಹುಡುಕಾಟ ಆರಂಭವಾಗಿದೆ. ಕಾಂಗ್ರೆಸ್ ತೊರೆದಿರುವ ಜಯಪ್ರಕಾಶ್ ಹೆಗ್ಡೆ ಅವರು ಮತ್ತೆ ಕೈ ಹಿಡಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೆಗ್ಡೆ ಅವರು ಮತ್ತೆ ಕಾಂಗ್ರೆಸ್ ಸೇರಿದರೆ ಅವರನ್ನು ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ
ಕಣಕ್ಕಿಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ರಾಜಕೀಯದಲ್ಲಿ ಯಾವುದೇ ಕ್ಷಣ ಯಾವುದೇ ಬದಲಾವಣೆಯಾಗಬಹುದು.