ಇತ್ತೀಚಿನ ಸುದ್ದಿ
ಜಲಕ್ಷಾಮದ ಭೀತಿ ಬಿಟ್ಟು ಬಿಡಿ, ತುಂಬೆ ಡ್ಯಾಮ್ ತುಂಬುತ್ತಿದೆ!: ಎಎಂಆರ್ ನಿಂದ ಹರಿದು ಬಂದಳು ನೇತ್ರಾವತಿ!!
08/06/2023, 12:14
ಅಶೋಕ್ ಕಲ್ಲಡ್ಕ ಮಂಗಳೂರು
ಶ್ರಾವ್ಯ ಸೂರ್ಯ ಮಂಗಳೂರು
info.reporterkarnataka@gmail.com
ಮುಂಗಾರು ಮಳೆ ವಿಳಂಬ ಹಾಗೂ ವಿಪರೀತ ಬಿಸಿಲಿನಿಂದ ತಳ ಕಂಡಿದ್ದ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಇದ್ಸಕ್ಕಿದ್ದ ಹಾಗೆ ನೀರು ತುಂಬಿದೆ. ಮಳೆ ಇಲ್ಲದೆ ಇದೇಗೆ ಮ್ಯಾಜಿಕ ನಡೆಯಿತು ಎಂದು ನಿಮಗೆಲ್ಲ ಆಶ್ಚರ್ಯವಾಗಬಹುದು. ಆದರೆ ಮ್ಯಾಜಿಕೂ ಇಲ್ಲ, ಏನೂ ಇಲ್ಲ, ಸರಪಾಡಿಯ ಎಎಂಆರ್ ಡ್ಯಾಮ್ ನಿಂದ ನೀರು ಬಿಡಲಾಗಿದೆ. ಸರಪಾಡಿಯಲ್ಲಿ ಕಟ್ಟಿ ಹಾಕಿದ ನೇತ್ರಾವತಿ ಇದೀಗ ತುಂಬೆ ಸೇರಿದ್ದಾಳೆ.
ಇಡೀ ಮಂಗಳೂರು ನಗರದ ಜನತೆಗೆ ನೀರು ಪೂರೈಸುವ ತುಂಬೆ ಡ್ಯಾಮ್ ನಲ್ಲಿ ಬಿಸಿಲ ಬೇಗೆಯಿಂದ ನೀರಿನ ಮಟ್ಟ 1.86 ಮೀಟರ್ ಗೆ ಕುಸಿದಿತ್ತು. ಇಷ್ಟು ತಳಕಂಡ ನೀರನ್ನು ಪಂಪ್ ನಲ್ಲಿ ಲಿಫ್ಟ್ ಮಾಡುವುದು ಕೂಡ ಕಷ್ಟ. ಇದರಿಂದ ಕಳೆದ ಸುಮಾರು 15 ದಿನಗಳಿಂದ ಮಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಇದೇ ಸರಿಯಾದ ಸಮಯ ಎಂದು ಕೊಂಡು ನೀರು ಮಾರಿ ಜೇಬು ತುಂಬಿಸಿಕೊಳ್ಳುವವರು ಭರ್ಜರಿ ವ್ಯಾಪಾರ ಕುದುರಿಸಿಕೊಂಡಿದ್ದರು. ನಗರದ ಎಲ್ಲೆಡೆ, ಗಲ್ಲಿ ಗಲ್ಲಿಗಳಲ್ಲಿ ಖಾಸಗಿಯವರ ನೀರಿನ ಟ್ಯಾಂಕರ್ ಓಡಾಡುತ್ತಿರುವುದು ಕಂಡು ಬರುತ್ತಿತ್ತು. ಈಗಲೂ ಬರುತ್ತಿದೆ.
ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಜಲಕ್ಷಾಮ ಉಂಟಾಗಿತ್ತು. ತುಂಬೆ ವೆಂಟೆಂಡ್ ಡ್ಯಾಮ್ ಬತ್ತಿ ಹೋಗಿರುವುದನ್ನು ಕಂಡು ಅಂದಿನ ಮೇಯರ್ ಹರಿನಾಥ್ ಅವರು ಕಣ್ಣೀರು ಹಾಕಿದ್ದರು. ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಸಾಕಷ್ಟು ಹೊಟೇಲ್ – ಕ್ಯಾಂಟೀನ್ ಗಳು ಮುಚ್ಚಿದ್ದವು. ಹಾಸ್ಟೆಲ್ ಗಳಿಂದ ವಿದ್ಯಾರ್ಥಿಗಳು ಗುಳೇ ಹೋಗಿದ್ದರು. ನಾಗರಿಕರು ಸಾಕಷ್ಟು ಕಷ್ಟ ಅನುಭವಿಸಿದ್ದರು.
ಇದೀಗ ಎಎಂಆರ್ ಡ್ಯಾಮ್ ನಿಂದ ನೀರು ಬಿಟ್ಟ ಬಳಿಕ ತುಂಬೆ ವೆಂಟೆಂಡ್ ಡ್ಯಾಮ್ ನ ನೀರಿನ ಮಟ್ಟ 4.25 ಮೀಟರ್ ಗೆ ಏರಿಕೆಯಾಗಿದೆ. ಇದು ಮಂಗಳೂರು ಜತೆಗೆ ನೀರು ಸರಬರಾಜು ಮಾಡಲು ಕನಿಷ್ಠ 13ರಿಂದ 15 ದಿನದವರೆಗೆ ಸಾಕಾಗುತ್ತದೆ. ಅಷ್ಟರಲ್ಲಿ ಮುಂಗಾರು ಮಳೆ ಶುರುವಾಗುತ್ತದೆ. ಮಳೆ ಶುರುವಾದರೆ ಒಂದು ವಾರದಲ್ಲಿ ಡ್ಯಾಮ್ ಭರ್ತಿಯಾಗುತ್ತದೆ.
ತುಂಬೆ ವೆಂಟೆಂಡ್ ಡ್ಯಾಮ್ ನಲ್ಲಿ ಎಷ್ಟು ನೀರು ಸಂಗ್ರಹಿಸಿಟ್ಟರೂ ನೀರು ವಿತರಣೆಯಲ್ಲಿರುವ ದೋಷದಿಂದ ಇಲ್ಲಿನ ಹೆಚ್ಚಿನ ವಾರ್ಡ್ ಗಳಲ್ಲಿ 365 ದಿನವೂ ನೀರಿನ ಬವಣೆ ತಪ್ಪಿದ್ದಲ್ಲ. ನೀರಿನ ಸಮಸ್ಯೆ ಬಗ್ಗೆ ಪಾಲಿಕೆ ಕಮಿಷನರ್ ಅವರನ್ನು ಕತ್ತಲಿನಲ್ಲಿಡುವ ಪ್ರಯತ್ನವನ್ನು ಇಲ್ಲಿನ ಎಂಜಿನಿಯರ್ ಗಳು ಸದಾ ಮಾಡುತ್ತಿರುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿಯವರು ಇತ್ತ ಗಮನಹರಿಸಬೇಕು.