ಇತ್ತೀಚಿನ ಸುದ್ದಿ
ಗ್ರಾಮ ಪಂಚಾಯಿತಿ ಸದಸ್ಯನಿಂದ ಮದ್ಯದಂಗಡಿಗೆ ಜೈ: ರೈತ ಸಂಘ, ಹಸಿರು ಸೇನೆ ಗರಂ; ಅಮಾನತಿಗೆ ಆಗ್ರಹ
19/07/2021, 14:26
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಉತ್ತರ ಕರ್ನಾಟಕದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮದ್ಯಪಾನದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಜನಾಂದೋಲನವೇ ನಡೆಸುತ್ತಿದ್ದರೆ, ಅಥಣಿಯಲ್ಲಿ ಜನರಿಂದ ಆರಿಸಿ ಹೋದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮದ್ಯಪಾನ ಪರ ಜೈ ಹಾಕಿದ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.
ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸುಮಾರು ಒಂದು ತಿಂಗಳಿಂದ ಗ್ರಾಮಸ್ಥರು ಮದ್ಯದಂಗಡಿ ತೆರವು ಗೊಳಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಬಿಜೆಪಿ ಯುವ ನಾಯಕ ಹಾಗೂ ಸಚಿವರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಅಶೋಕ್ ಭಾನುದಾಸ್ ಮಾನೆ ಅವರು ಸಾಮಾಜಿಕ ಹಿತ ಕಾಯುವುದನ್ನು ಬಿಟ್ಟು ಎಣ್ಣೆ ಬೇಕು ಎಂದು ನಶೆಯಲ್ಲಿ ಘೋಷಣೆ ಕೂಗಿದ ಘಟನೆ ನಡೆದಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ್ ಪಡಸಲಗಿ ಈ ಘಟನೆಯನ್ನು ಖಂಡಿಸಿ ಈತನ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅಥಣಿ ತಾಲೂಕ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ವಿಷಯದ ಬಗ್ಗೆ ಸಾಮಾಜಿಕ ಹೋರಾಟಗಾರರು ಅಥಣಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಕೂಡಲೇ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಮೇಲಾಧಿಕಾರಿಗಳು ಗ್ರಾಮಸ್ಥರು ನೋವಿಗೆ ಸ್ಪಂದಿಸುತ್ತಾರಾ ಹಾಗೂ ಅಶೋಕ್ ಭಾನುದಾಸ್ ಮಾನೆ ವಿರುದ್ಧ ಕ್ರಮ ಕೈಗೊಲ್ಲುತ್ತರಾ ಕಾದು ನೋಡಬೇಕು.